By Election Result Announce: ಫಲಿಸದ ದೋಸ್ತಿ ನಂಟು: ಗ್ಯಾರಂಟಿಗೆ ಜೈ ಎಂದ ಮತದಾರ ಬಂಧು, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು!

ನವೆಂಬರ್ 23, 2024 - 14:06
 0  12
By Election Result Announce: ಫಲಿಸದ ದೋಸ್ತಿ ನಂಟು: ಗ್ಯಾರಂಟಿಗೆ ಜೈ ಎಂದ ಮತದಾರ ಬಂಧು, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು!

ಬೆಂಗಳೂರು:- ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ  ಇಂದು ಪ್ರಕಟಗೊಂಡಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ. 

ಈ ಮೂಲಕ ಮತದಾರ ಬಂಧುಗಳು ಗ್ಯಾರಂಟಿಗೆ ಜೈ ಎಂದಿದ್ದು, ದೋಸ್ತಿ ನಾಯಕರಿಗೆ ಮುಟ್ಟಿ ನೋಡುವಂತೆ ಮಾಡಿದ್ದಾರೆ. ಇಡೀ ರಾಜ್ಯವೇ ಫಲಿತಾಂಶದತ್ತ ಕಾತುರದಿಂದ ಕಾಯುತ್ತಿತ್ತು. ಆದರೆ 3 ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ನಂಬಿಕೆ ಇಟ್ಟಿದ್ದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಯಾರು ನಿರೀಕ್ಷೆ ಮಾಡದ ಹಾಗೆ ತಕ್ಕ ಪಾಠವನ್ನು ಮತದಾರ ಪ್ರಭುಗಳು ಕೊಟ್ಟಿದ್ದಾರೆ. 

ಮೊದಲಿಗೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲವು ಸಾಧಿಸಿದ್ದಾರೆ.

ಆರಂಭದಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 9,230 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಂಗಾರ ಹುನುಮಂತ ವಿರುದ್ಧ ಜಯಗಳಿಸಿದ್ದಾರೆ

ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿಗೆ ಪ್ರತಿಷ್ಠೆಯ ಕಣವಾಗಿದ್ದ ಶಿಗ್ಗಾಂವಿಯಲ್ಲಿ ಬಿಜೆಪಿಯ ಭರತ್ ಬೊಮ್ಮಾಯಿಗೆ ಸೋಲಾಗಿದೆ. ಈ ಮೂಲಕ ಬೊಮ್ಮಾಯಿ ಕುಟುಂಬದ ಮೂರನೇ ತಲೆಮಾರು ವಿಧಾನಸಭೆ ಪ್ರವೇಶಿಸುವುದು ತಪ್ಪಿಹೋಗಿದೆ. ಬಂಡಾಯದ ಬಿಸಿಯ ನಡುವೆಯೂ ಸ್ಪರ್ಧಿಸಿದ್ದ ಕಾಂಗ್ರೆಸ್​ನ ಯಾಸಿರ್ ಅಹಮದ್​ ಖಾನ್​ ಪಠಾಣ್ ಗೆಲುವು ಸಾಧಿಸಿದ್ದಾರೆ.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ ಅಭ್ಯರ್ಥಿ ಸಿಪಿ ಯೋಗೇಶ್ವರ್​​ ಅವರಿಗೆ ಗೆಲುವಾಗಿದೆ. ಎನ್​ಡಿಎ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರಿಗೆ ಸೋಲಾಗಿದೆ. ಈ ಮೂಲಕ ನಿಖಿಲ್​ ಕುಮಾರಸ್ವಾಮಿ ಅವರಿಗೆ ಇದು ಮೂರನೇ ಸೋಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow