Shreyas Iyer: ICU ನಲ್ಲಿ ಶ್ರೇಯಸ್ ಅಯ್ಯರ್ʼಗೆ ಚಿಕಿತ್ಸೆ..! ಆಂತರಿಕ ರಕ್ತಸ್ರಾವದಿಂದ ಆರೋಗ್ಯ ಸ್ಥಿತಿ ಗಂಭೀರ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪಕ್ಕೆಲುಬಿನ ಗಾಯದಿಂದ ಬಳಲುತ್ತಿದ್ದ ಟೀಮ್ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ಆಂತರಿಕ ರಕ್ತಸ್ರಾವದ ಹಿನ್ನೆಲೆಯಲ್ಲಿ ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ತೀವ್ರ ನಿಗಾ ಘಟಕ (ICU)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಬ್ಯಾಕ್‌ವರ್ಡ್ ಪಾಯಿಂಟ್‌ನಿಂದ ಓಡುತ್ತಾ ಕ್ಯಾಚ್ ಹಿಡಿಯುವ ವೇಳೆ ಎಡ ಪಕ್ಕೆಲುಬಿಗೆ ಗಂಭೀರ ಗಾಯವಾಗಿತ್ತು. ಗಾಯ ತೀವ್ರತೆಯನ್ನು ಗಮನಿಸಿ ಡ್ರೆಸ್ಸಿಂಗ್ ರೂಮ್‌ನಿಂದ ಆಸ್ಪತ್ರೆಗೆ ಕರೆದೊಯಲಾಗಿದೆ.
"ಶ್ರೇಯಸ್ ಐಸಿಯುನಲ್ಲಿ ಸುಮಾರು 2–7 ದಿನಗಳವರೆಗೆ ಚಿಕಿತ್ಸೆ ಪಡೆಯಲಿದ್ದಾರೆ. ರಕ್ತಸ್ರಾವದಿಂದ ಸೋಂಕು ಹರಡುವುದನ್ನು ತಡೆಯಲು ತೀವ್ರ ನಿಗಾ ಅಗತ್ಯವಾಗಿದೆ. ಅವರ ಪರಿಸ್ಥಿತಿ ಸ್ಥಿರವಾಗಿದೆ, ಆದರೆ ಅದೂ ಗಂಭೀರವಾಗಬಹುದಾಗಿತ್ತು" ಎಂದು ತಿಳಿಸಲಾಗಿದೆ.
ಆರಂಭದಲ್ಲಿ, ಶ್ರೇಯಸ್ ಅಯ್ಯರ್ ಸುಮಾರು ಮೂರು ವಾರಗಳ ಕಾಲ ಮೈದಾನದಿಂದ ಹೊರಗಿರಬಹುದು ಎಂದು ನಿರೀಕ್ಷಿಸಲ್ಪಟ್ಟಿತ್ತು. ಆದರೆ ಈಗ, ಚೇತರಿಕೆಯ ಅವಧಿ ಹೆಚ್ಚು ವಿಸ್ತಾರಗೊಳ್ಳುವ ಸಾಧ್ಯತೆ ಇದೆ. 31 ವರ್ಷದ ಅಯ್ಯರ್ T20 ತಂಡದ ಭಾಗವಾಗಿಲ್ಲ ಮತ್ತು ಭಾರತಕ್ಕೆ ಮರಳಲು ಫಿಟ್ ಆಗುವುದಕ್ಕೆ ಕನಿಷ್ಠ ಒಂದು ವಾರ ಸಿಡ್ನಿಯಲ್ಲಿ ವಾಸ್ತವ್ಯ ಇರಲಿದೆ.
ಬಿಸಿಸಿಐ ಸ್ಪಷ್ಟನೆ:
ಶ್ರೇಯಸ್ ಅಯ್ಯರ್ ಅವರ ಸ್ಕ್ಯಾನ್ ರಿಪೋರ್ಟ್ನಲ್ಲಿ ಗುಲ್ಮಕ್ಕೆ ಗಾಯವಾಗಿರುವುದು ಕಂಡುಬಂದಿದೆ. ಇದೀಗ ಸಿಡ್ನಿಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯವಾಗಿ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ.
ಬಿಸಿಸಿಐ ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ವೈದ್ಯಕೀಯ ತಜ್ಞರೊಂದಿಗೆ ಸಮಾಲೋಚಿಸಿ ಅವರ ಗಾಯದ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಶ್ರೇಯಸ್ ಅವರ ದೈನಂದಿನ ಪ್ರಗತಿಯನ್ನು ಮೌಲ್ಯಮಾಪನ ಮಾಡಲು ಭಾರತೀಯ ತಂಡದ ವೈದ್ಯರು ಸಿಡ್ನಿಯಲ್ಲಿಯೇ ಇರಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?