Sudha Murthy: ಡಾ. ಸುಧಾಮೂರ್ತಿ ಯಾಮಾರಿಸಲು ಸೈಬರ್ ವಂಚಕರ ಯತ್ನ! ರಾಜ್ಯಸಭೆ ಸದಸ್ಯೆ ಮಾಡಿದ್ದೇನು..?
ಬೆಂಗಳೂರು: ಸಂಸದ ಡಾ.ಕೆ. ಸುಧಾಕರ್ ಅವರ ಪತ್ನಿಯನ್ನು ಡಿಜಿಟಲ್ ಅರೆಸ್ಟ್ ಮಾಡಿ, 14 ಲಕ್ಷ ವಂಚನೆ ಮಾಡಿದ ಪ್ರಕರಣ ನಡೆದ ಬೆನ್ನಲ್ಲೇ ಇದೀಗ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ವಂಚನೆ ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸುಧಾಮೂರ್ತಿ ಅವರ ಪರವಾಗಿ ಗಣಪತಿ ಎಂಬವರು ನೀಡಿದ ದೂರು ಆಧರಿಸಿ ಅಪರಿಚಿತ ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
"ಸೆ.5ರಂದು ಕೇಂದ್ರದ ಸರ್ಕಾರ ದೂರ ಸಂಪರ್ಕ ಇಲಾಖೆ ಅಧಿಕಾರಿಯ ಸೋಗಿನಲ್ಲಿ ಸುಧಾಮೂರ್ತಿ ಅವರಿಗೆ ಕರೆ ಮಾಡಿರುವ ವಂಚಕ ತನ್ನ ಬಗ್ಗೆ ಪರಿಚಯಿಸಿಕೊಂಡಿದ್ದ. ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿಲ್ಲ. ಹೀಗಾಗಿ ವೈಯಕ್ತಿಕ ಮಾಹಿತಿ ನೀಡುವಂತೆ ಕೇಳಿದ್ದಾನೆ" ಎಂದು ದೂರಿನಲ್ಲಿ ತಿಳಿಸಲಾಗಿದೆ.
ಲಿಂಕ್ ಆಗದ ನಿಮ್ಮ ಮೊಬೈಲ್ ನಂಬರ್ನಿಂದ ಅಶ್ಲೀಲ ವಿಡಿಯೋ ಪ್ರಸಾರವಾಗುತ್ತಿದೆ. ಇದನ್ನು ತಪ್ಪಿಸಲಾಗಿದೆ. ಮಾಹಿತಿ ನೀಡದಿದ್ದರೆ ಮೊಬೈಲ್ ನಂಬರ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಈ ವೇಳೆ ಅಸಭ್ಯವಾಗಿಯೂ ವರ್ತಿಸಿದ್ದಾನೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅನುಮಾನ ಬಂದು ಟ್ರೂ ಕಾಲರ್ನಲ್ಲಿ ಪರಿಶೀಲಿಸಿದಾಗ ಟೆಲಿಕಾಮ್ ಡಿಪಾರ್ಟ್ಮೆಂಟ್ ಎಂದು ತೋರಿಸಿದೆ.
ನಕಲಿ ಅಧಿಕಾರಿಯ ಸೋಗಿನಲ್ಲಿ ವೈಯಕ್ತಿಕ ಮಾಹಿತಿ ಪಡೆಯಲು ಯತ್ನಿಸಲು ಅನಾಮಿಕ ವ್ಯಕ್ತಿ ಪ್ರಯತ್ನಿಸಿದ್ದಾನೆ. ಹೀಗಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು" ದೂರಿನಲ್ಲಿ ಒತ್ತಾಯಿಸಲಾಗಿದೆ.ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?