ರವಿ ಗೌಡ ನಿರ್ದೇಶನ, ನಿರ್ಮಾಣ ಹಾಗೂ ನಟನೆಯಲ್ಲಿ ಮೂಡಿ ಬಂದಿರುವ ಐ ಆಮ್ ಗಾಡ್’ ಸಿನಿಮಾ ಇದೀಗ ತೆರೆಗೆ ಬರಲು ಸಿದ್ಧವಾಗಿದೆ.
ಎರಡು ಹಾಡುಗಳ ಮೂಲಕವೇ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರ ಈಗ ಟ್ರೈಲರ್‌ನಿಂದ ಕುತೂಹಲ ಹುಟ್ಟಿಸಿದೆ. ರವಿ ಗೌಡ ಅವರ ಗುರು ಹಾಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರ ಕೈಯಲ್ಲಿ ಟ್ರೈಲರ್ ಬಿಡುಗಡೆ ಆಗಿದೆ. ಶಿಷ್ಯನ ಈ ಪ್ರಯತ್ನವನ್ನು ಉಪೇಂದ್ರ ಸಿಕ್ಕಾಪಟ್ಟೆ ಮೆಚ್ಚಿದ್ದಾರೆ.
‘ಉಪ್ಪಿ 2’ ಚಿತ್ರದಲ್ಲಿ ಉಪೇಂದ್ರರ ಜೊತೆ ಕೆಲಸ ಮಾಡಿದ ಅನುಭವದಿಂದ ಪ್ರೇರಿತರಾದ ರವಿ ಗೌಡ, ಈಗ ತಮ್ಮದೇ ಚಿತ್ರವನ್ನು ನಿರ್ದೇಶಿಸಿ ನಟಿಸುವ ಮೂಲಕ ಕನಸು ನನಸಾಗಿಸಿಕೊಂಡಿದ್ದಾರೆ. ಟ್ರೈಲರ್ ನೋಡಿದ್ರೆ, ಇದು ಸಸ್ಪೆನ್ಸ್, ಥ್ರಿಲ್ಲರ್, ಲವ್ ಸ್ಟೋರಿ ಅಂಶಗಳನ್ನು ಹೊಂದಿರುವ ಸಿನಿಮಾ ಅನ್ನೋದು ಸ್ಪಷ್ಟವಾಗುತ್ತದೆ.
ಚಿತ್ರದಲ್ಲಿ ರವಿ ಗೌಡ ಜೊತೆಗೆ ವಿಜೇತಾ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ರವಿಶಂಕರ್, ಅವಿನಾಶ್, ಅರುಣ ಬಾಲರಾಜ್ ಹಾಗೂ ನಿರಂಜನ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಜಿತಿನ್ ದಾಸ್ ಕ್ಯಾಮೆರಾವರ್ಕ್ ಮಾಡಿದ್ದಾರೆ.
ಪ್ರೇಕ್ಷಕರ ಕುತೂಹಲ ಕೆರಳಿಸಿರುವ ಈ ಸಿನಿಮಾ ಇದೇ ನವೆಂಬರ್ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.