ತಂದೆ-ಮಗನ ದುಷ್ಕೃತ್ಯ..! ಮಾವನಿಂದ ಸೊಸೆಯ ಮೇಲೆ ಅತ್ಯಾ*ಚಾರ - 10 ಅಡಿ ಗುಂಡಿಯಲ್ಲಿ ಶವ ಹೂತಿಟ್ಟ ಕೀಚಕರು

ಫರಿದಾಬಾದ್: ವ್ಯಕ್ತಿಯೊಬ್ಬ ತನ್ನ ಸೊಸೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆಕೆಯನ್ನು ಕೊಂದ ನಂತರ, ಆಕೆಯ ಶವವನ್ನು ತನ್ನ ಮನೆಯ ಬಳಿ ಅಗೆದು ಹತ್ತು ಅಡಿ ಹೊಂಡದಲ್ಲಿ ಹೂತು ಹಾಕಿದ್ದಾನೆ. ಆಕೆ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ತನಿಖೆ ನಡೆಸಿದ ಪೊಲೀಸರು, ಅತ್ತೆ-ಮಾವಂದಿರನ್ನು ಬಂಧಿಸಿದ್ದಾರೆ. ಈ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲೆಯ ಶಿಕೋಹಾಬಾದ್‌ನ 24 ವರ್ಷದ ಮಹಿಳೆ ಜುಲೈ 2023 ರಲ್ಲಿ ಫರಿದಾಬಾದ್‌ನ ವ್ಯಕ್ತಿಯನ್ನು ವಿವಾಹವಾಗಿದ್ದರು. ಆದರೆ ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಆಕೆಗೆ ತೀವ್ರ ಕಿರುಕುಳ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಕೊಲೆ ನಡೆದಿದ್ದು ಹೇಗೆ?
ಅಪ್ಪ-ಮಗ ಸೇರಿಕೊಂಡು ಏ.14ರಂದು ಸಂತ್ರಸ್ತ ಯುವತಿಯನ್ನು ಕೊಲ್ಲಲು ಸರಿಯಾಗಿ ಪ್ಲ್ಯಾನ್ ಮಾಡಿದ್ದರು. ಈ ಪ್ಲ್ಯಾನ್‌ನ್ನು ಸರಿಯಾಗಿ ಕಾರ್ಯರೂಪಕ್ಕೆ ತರಲು ಮಗ ತನ್ನ ಅಮ್ಮನನ್ನು ಉತ್ತರ ಪ್ರದೇಶದ ಇಟಾನಗರಕ್ಕೆ ಮದುವೆಗೆಂದು ಕಳುಹಿಸಿದ್ದ. ಏ.21ರಂದು ರಾತ್ರಿ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ಸಂತ್ರಸ್ತೆಗೆ ಹಾಗೂ ಆಕೆಯ ಸಹೋದರಿಗೆ ನೀಡಿದ್ದರು. ಬಳಿಕ ಇಬ್ಬರು ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು.
ಕೊಲೆ ಮಾಡುವ ಉದ್ದೇಶದಿಂದ ಮಾವ ಕೋಣೆಗೆ ತೆರಳಿದ್ದಾಗ ಸೊಸೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದಳು. ಇದನ್ನು ಕಂಡು ಮೊದಲು ಆಕೆಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ. ನಂತರ ತನ್ನ ಮಗನನ್ನು ಕೋಣೆಗೆ ಕರೆದಿದ್ದಾನೆ. ಆದರೆ ಅತ್ಯಾಚಾರದ ವಿಷಯವನ್ನು ತಿಳಿಸಿರಲಿಲ್ಲ. ಶವವನ್ನ ಬಟ್ಟೆಯೊಂದರಲ್ಲಿ ಸುತ್ತಿ ಇಬ್ಬರು ಸೇರಿ ಎತ್ತಿಕೊಂಡು ಮನೆಯ ಹೊರಗೆ ಬಂದಿದ್ದಾರೆ.
ಕೊಲೆಗೂ ಮುನ್ನವೇ ನೆರೆಹೊರೆಯವರನ್ನು ನಂಬಿಸಲು ಒಳಚರಂಡಿ ಕೆಲಸಕ್ಕಾಗಿ ಎಂದು ತಿಳಿಸಿ 10 ಅಡಿ ಆಳದ ಗುಂಡಿ ತೋಡಿಸಿದ್ದರು. ಅದೇ ಗುಂಡಿಗೆ ಹೆಣವನ್ನು ಬಿಸಾಕಿ ಬಳಿಕ ಅದರ ಮೇಲೆ ಇಟ್ಟಿಗೆ ಇರಿಸಿ, ಮಣ್ಣಿನಿಂದ ಮುಚ್ಚಿದ್ದರು. ಕೆಲವು ದಿನಗಳ ಬಳಿಕ ಅದರ ಮೇಲೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿತ್ತು. ಇದೆಲ್ಲ ಆದ ಬಳಿಕ ಏ.25 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದರು.
ಈ ಘಟನೆಯಾದ ಸುಮಾರು 2 ತಿಂಗಳ ಬಳಿಕ ಜೂ.21ರಂದು ಮನೆಯ ಹೊರಗೆ 10 ಅಡಿ ಆಳದ ಗುಂಡಿಯಲ್ಲಿ ಶವ ಪತ್ತೆಯಾಗಿತ್ತು. ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಕುರಿತು ಸಂತ್ರಸ್ತೆಯ ಸಹೋದರಿ ಮಾತನಾಡಿ, ಮದುವೆಯಾದಾಗಿನಿಂದ ನನ್ನ ಸಹೋದರಿ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ. ಈ ನೋವಿನಿಂದಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಆಕೆ ತವರು ಮನೆಗೆ ಬಂದಿದ್ದಳು. ಅದಾದ ಒಂದು ವರ್ಷದ ಬಳಿಕ ಮತ್ತೆ ಆಕೆ ಅತ್ತೆ ಮನೆಗೆ ಬಂದಿದ್ದಳು.
ಆಕೆಗೆ ನೀಡಿರುವ ವರದಕ್ಷಿಣೆ ಅತ್ತೆ ಮಾವನಿಗೆ ಸಾಕಾಗಿರಲಿಲ್ಲ. ಇನ್ನೂ ಹೆಚ್ಚಿನ ಹಣ, ಒಡವೆ ತರಲು ಯಾವಾಗಲೂ ಒತ್ತಡ ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಆಧಾರದ ಮೇಲೆ ಮನೆಯವರನ್ನು ವಿಚಾರಣೆಗೆ ಒಳಪಡಿಸಿದಾಗ ಸಂತ್ರಸ್ತೆಯ ಮಾವ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಸಂತ್ರಸ್ತೆಯ ಮಾವ, ಅತ್ತೆ, ಪತಿ ಮತ್ತು ಅತ್ತಿಗೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






