ಬೆಂಗಳೂರಿಗರೇ ಗಮನಿಸಿ: 3 ದಿನ 'ಕಾವೇರಿ ನೀರು' ಪೂರೈಕೆಯಲ್ಲಿ ವ್ಯತ್ಯಯ!
ಬೆಂಗಳೂರು: ಕಾವೇರಿ ನೀರು ಸರಬರಾಜು ಯೋಜನೆಯ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 15, 16 ಮತ್ತು 17ರಂದು ನಗರದಾದ್ಯಂತ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ವಿ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾವೇರಿ 5ನೇ ಹಂತದಲ್ಲಿ ಸೆಪ್ಟೆಂಬರ್ 15ರ ಬೆಳಗ್ಗೆ 1 ಗಂಟೆಯಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1 ಗಂಟೆಯವರೆಗೆ ಒಟ್ಟು 60 ಗಂಟೆಗಳ ಕಾಲ ನೀರು ಬರದು. ಹಂತ 1, 2, 3 ಮತ್ತು 4ರಲ್ಲಿ ಸೆಪ್ಟೆಂಬರ್ 16ರ ಬೆಳಗ್ಗೆ 6ರಿಂದ ಸೆಪ್ಟೆಂಬರ್ 17ರ ಬೆಳಗ್ಗೆ 6ರವರೆಗೆ 24 ಗಂಟೆಗಳ ಕಾಲ ನೀರು ಪೂರೈಕೆ ನಿಲ್ಲಲಿದೆ.
ಜಲಮಂಡಳಿ ಪ್ರಕಟಣೆಯಲ್ಲಿ, ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಒದಗಿಸಲು ಮತ್ತು ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಾಗಾರಗಳು ಹಾಗೂ ಮುಖ್ಯ ಕೊಳವೆ ಮಾರ್ಗಗಳ ಸರಾಗ ಕಾರ್ಯಚಟುವಟಿಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಈ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ. ಸಾರ್ವಜನಿಕರು ಮುಂಚಿತವಾಗಿ ನೀರನ್ನು ಸಂಗ್ರಹಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?