ಮದುವೆಯಾಗಲು ನೋ ಎಂದ ಪ್ರೇಯಸಿ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿ!

ಅರಸೀಕೆರೆ:ಮದುವೆಯಾಗಲು ಪ್ರಿಯತಮೆ ನಿರಾಕರಿಸಿದಳೆಂದು ಜಿಗುಪ್ಸೆಗೊಂಡು ವಿಷ ಸೇವಿಸಿದ್ದ ಪ್ರಿಯಕರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬೈರಾಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬೈರಾಗೊಂಡನಹಳ್ಳಿ ಗ್ರಾಮದ ದರ್ಶನ್ (22) ಎಂಬಾತ ಮೃತಪಟ್ಟಿದ್ದಾನೆ. ಗಂಡಸಿ ಹೋಬಳಿ ಬೇವಿನಹಳ್ಳಿಯಲ್ಲಿರುವ ಅಜ್ಜಿ ಮನೆಯಿಂದ ಕಾಲೇಜಿಗೆ ತೆರಳುತ್ತಿದ್ದ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದ. ಕಳೆದ ಐದಾರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಬಿಎ ಪದವಿ ಮುಗಿದ ಬಳಿಕ ಗ್ರಾಮದಲ್ಲಿ ಬೇಸಾಯ ಮಾಡಿಕೊಂಡಿದ್ದ. ಮದುವೆಯಾಗುವುದಾಗಿ ಇಬ್ಬರೂ ನಿಶ್ಚಯಿಸಿ ಭೇಟಿಯಾಗುತ್ತಿದ್ದರು. ವಿವಾಹ ವಿಚಾರವನ್ನು ಪದೆ ಪದೇ ಪ್ರಸ್ತಾಪಿಸಿದ್ದಕ್ಕೆ ಇತ್ತೀಚೆಗೆ ಯುವತಿ ದರ್ಶನ್‌ನಿಂದ ಅಂತರ ಕಾಯ್ದುಕೊಂಡಿದ್ದಳು ಎನ್ನಲಾಗಿದೆ.
ಅದರಿಂದ ಮನನೊಂದಿದ್ದ ದರ್ಶನ್ ಫೆ.5 ರಂದು ಮನೆಯಲ್ಲಿಯೇ ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ ಆತನನ್ನು ಸ್ನೇಹಿತರಾದ ರವಿ ಮತ್ತು ಯಶ್ವಂತ್ ಅರಸೀಕೆರೆ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಭಾನುವಾರ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ. ದರ್ಶನ್ ಸಾವಿಗೆ ಯುವತಿಯೇ ಕಾರಣ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






