ಕ್ಷುಲ್ಲಕ ವಿಚಾರಕ್ಕೆ ಶುರುವಾದ ಗಲಾಟೆ: ಮಗನಿಂದಲೇ ತಂದೆಯ ಹತ್ಯೆ..!
ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ತಂದೆ-ಮಗನ ನಡುವೆ ನಡೆದ ವಾಗ್ವಾದ ಭೀಕರ ರೂಪ ಪಡೆದುಕೊಂಡು, ಮಗನೇ ತಂದೆಗೆ ಚಾಕುವಿನಿಂದ ಇರಿದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡ ಯಲ್ಲಪ್ಪ ಸಂಕುದ್ (72) ಅವರನ್ನು ತಕ್ಷಣವೇ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಪಾತ್ರೆ ವಿಚಾರಕ್ಕೆ ತಂದೆ ಯಲ್ಲಪ್ಪ ಮತ್ತು ಮಗ ಮಹಾಂತೇಶ್ ನಡುವೆ ಜಗಳ ತಾರಕಕ್ಕೆ ಏರಿದ್ದು, ಕೋಪಗೊಂಡ ಮಹಾಂತೇಶ್ ತಂದೆಯನ್ನು ನಾಲ್ಕು ಕಡೆ ಚಾಕುವಿನಿಂದ ಇರಿದನು. ಹೊಟ್ಟೆ, ಎದೆ ಮತ್ತು ಬೆನ್ನು ಸೇರಿ ಹಲವು ಕಡೆ ಇರಿತವಾಗಿದ್ದು, ಗಾಯಗೊಂಡ ಯಲ್ಲಪ್ಪರನ್ನು ಕುಟುಂಬಸ್ಥರು ಚಾಕು ಸಮೇತವೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯಲ್ಲಪ್ಪ ದಂಪತಿಗೆ ಮೂವರು ಮಕ್ಕಳು ಇದ್ದಾರೆ. ಆರೋಪಿ ಮಹಾಂತೇಶ್ ಹಿರಿಯ ಮಗನಾಗಿದ್ದು, ತಾಯಿ ಮತ್ತು ತಮ್ಮಂದಿರ ಜೊತೆ ಪ್ರತ್ಯೇಕವಾಗಿ ವಾಸವಾಗುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಹಣಕಾಸು ಸಂಬಂಧಿ ವಿವಾದಗಳಿಂದ ಕುಟುಂಬದಲ್ಲಿ ಕಲಹ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಘಟನೆಯ ಸಮಯದಲ್ಲಿ ತಾಯಿ ತಂದೆಯಿಂದ ತಂದಿದ್ದ ಪಾತ್ರೆಯ ವಿಚಾರ ಮತ್ತೆ ಜಗಳಕ್ಕೆ ಕಾರಣವಾಗಿದ್ದು, ಕೋಪಗೊಂಡ ಮಹಾಂತೇಶ್ ತಂದೆ ಮೇಲೆ ದಾಳಿ ನಡೆಸಿದ್ದಾನೆ. ಮಧ್ಯ ಪ್ರವೇಶಿಸಿದ ಯಲ್ಲಪ್ಪನ ಹೆತ್ತವರ ಮೇಲೂ ಹಲ್ಲೆ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಮಹಾಂತೇಶ್ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?