ಟ್ರಂಪ್ ಪುಸ್ತಕ ‘ಸೇವ್ ಅಮೆರಿಕ’ಗೆ ಅಮೇಜಾನ್‌ನಲ್ಲಿ ಭರ್ಜರಿ ಬೇಡಿಕೆ! ಈ ಪುಸ್ತಕದಲ್ಲಿ ಏನಿದೆ?

ಸೆಪ್ಟೆಂಬರ್ 4, 2024 - 16:00
 0  10
ಟ್ರಂಪ್ ಪುಸ್ತಕ ‘ಸೇವ್ ಅಮೆರಿಕ’ಗೆ ಅಮೇಜಾನ್‌ನಲ್ಲಿ ಭರ್ಜರಿ ಬೇಡಿಕೆ! ಈ ಪುಸ್ತಕದಲ್ಲಿ ಏನಿದೆ?
FOCUS KARNATAKA Donald Trump

ಟ್ರಂಪ್ ಪುಸ್ತಕ ‘ಸೇವ್ ಅಮೆರಿಕ’ಗೆ ಅಮೇಜಾನ್‌ನಲ್ಲಿ ಭರ್ಜರಿ ಬೇಡಿಕೆ! ಈ ಪುಸ್ತಕದಲ್ಲಿ ಏನಿದೆ?

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಹೊಸ್ತಲಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಅವರು ಬರೆದಿರುವ ‘ಸೇವ್ ಅಮೆರಿಕ' ಎಂಬ ಪುಸ್ತಕ ಪ್ರಕಟವಾಗಿದೆ. ಅಮೆರಿಕ ಕಾಲಮಾನ ಸೆಪ್ಟೆಂಬರ್ 3, ಮಂಗಳವಾರ ಸಂಜೆ ಈ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಆನ್‌ಲೈನ್ ಶಾಪಿಂಗ್‌ನ ಜನಪ್ರಿಯ ತಾಣ ಅಮೇಜಾನ್‌ನಲ್ಲಿ ಇದೀಗ ಈ ಪುಸ್ತಕ ಬೆಸ್ಟ್‌ ಸೆಲ್ಲರ್ ಆಗಿದ್ದು, ಭಾರೀ ಬೆಲೆ ಇದ್ದರೂ ಕೂಡಾ ಜನರು ಈ ಪುಸ್ತಕವನ್ನು ಮುಗಿಬಿದ್ದ ಖರೀದಿ ಮಾಡುತ್ತಿದ್ದಾರೆ.

ಅಮೇಜಾನ್‌ ತಾಣದಲ್ಲಿ ‘ಅಮೆರಿಕದ ಅಧ್ಯಕ್ಷರು ಹಾಗೂ ದೇಶದ ಮುಖ್ಯಸ್ಥರ ಆತ್ಮಕಥೆ’ ಎಂಬ ವಿಭಾಗವಿದೆ. ಈ ವಿಭಾಗದಲ್ಲಿ ಕಾಣಿಸಿಕೊಂಡಿರುವ ಟ್ರಂಪ್ ಅವರ ಸೇವ್ ಅಮೆರಿಕ ಪುಸ್ತಕ ಅಮೇಜಾನ್‌ನ ಬೆಸ್ಟ್‌ ಸೆಲ್ಲರ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ಇದೆ. ಒಟ್ಟಾರೆ ಅಮೇಜಾನ್ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿ ಈ ಪುಸ್ತಕ ಇದೆ.

ಅಮೇಜಾನ್‌ನಲ್ಲಿ ಈ ಪುಸ್ತಕದ ಬೆಲೆ 92.06 ಅಮೆರಿಕನ್ ಡಾಲರ್. ಆದರೆ ಮಳಿಗೆಗಳಲ್ಲಿ ಈ ಪುಸ್ತಕದ ಬೆಲೆ 99 ಡಾಲರ್ ಇದೆ. ಅಮೇಜಾನ್‌ನಲ್ಲಿ ಶೇ. 7ರಷ್ಟು ರಿಯಾಯ್ತಿ ನೀಡಲಾಗಿದೆ. ಟ್ರಂಪ್ ಅವರು ತಮ್ಮ ಟ್ರೂತ್ ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲೂ ತಮ್ಮ ಪುಸ್ತಕದ ಕುರಿತಾಗಿ ಪ್ರಚಾರ ಮಾಡಿದ್ದಾರೆ. ನನ್ನ ಹೊಸ ಪುಸ್ತಕ ಇಂದು ಮಾರುಕಟ್ಟೆಗೆ ಬಂದಿದೆ. ನೀವು ನಿಮ್ಮ ಪ್ರತಿಯನ್ನು ಖರೀದಿ ಮಾಡಿದ್ದೀರಾ? ಈ ಪುಸ್ತಕದಲ್ಲಿ ಬಳಕೆ ಮಾಡಲಾಗಿರುವ ಫೋಟೋಗಳನ್ನು ನಾನೇ ಖುದ್ದಾಗಿ ಆಯ್ಕೆ ಮಾಡಿರುವೆ. ಅಮೆರಿಕ ಅಧ್ಯಕ್ಷನಾಗಿ ನಾನು ಕಾರ್ಯ ನಿರ್ವಹಿಸಿದ ಅವಧಿ, ಅಮೆರಿಕ ಅಧ್ಯಕ್ಷೀಯ ಕಚೇರಿ ವೈಟ್ ಹೌಸ್‌ನ ಅನುಭವ. ಸದ್ಯ ಮೂರನೇ ಬಾರಿಗೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ನಾನು ಕಣಕ್ಕಿಳಿದಿರುವ ಕುರಿತಾಗಿ ಈ ಪುಸ್ತಕದಲ್ಲಿ ವಿವರಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಪುಸ್ತಕವನ್ನು ಎಲ್ಲರೂ ಖರೀದಿ ಮಾಡಬೇಕು ಎಂದಿರು ಟ್ರಂಪ್, ಇದು ನಿಮ್ಮ ಪುಸ್ತಕಗಳ ಕಪಾಟಿನಲ್ಲಿ ಇರಲೇ ಬೇಕಾದ ಪುಸ್ತಕ ಎಂದಿದ್ದಾರೆ. ಅಮೆರಿಕದ ಜನತೆ ಅದರಲ್ಲೂ ಅಮೆರಿಕವೇ ಪ್ರಥಮ ಎಂದು ಆದ್ಯತೆ ನೀಡುವ ದೇಶ ಪ್ರೇಮಿಗಳು ಖರೀದಿಸಬೇಕಾದ ಪುಸ್ತಕ ಇದು ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ಟ್ರಂಪ್ ಅವರು ಬರೆದಿರುವ ಈ ಪುಸ್ತಕದಲ್ಲಿ ಅಪರೂಪದ ಫೋಟೋಗಳು, ಘಟನೆಗಳ ವಿವರ ಇದೆ. ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಅವಧಿಯ ಘಟನೆಗಳು ಹಾಗೂ ಫೋಟೋಗಳು, ಚುನಾವಣಾ ಪ್ರಚಾರದ ವೇಳೆ ನಡೆದ ಘಟನೆಗಳು, ಎಲ್ಲಕ್ಕಿಂತ ಪ್ರಮುಖವಾಗಿ ಅಮೆರಿಕದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ, ಈ ವೇಳೆ ಅವರು ಕೈ ಎತ್ತಿ ಘೋಷಣೆ ಕೂಗಿದ್ದು.. ಹೀಗೆ ಹಲವು ಸಂಗತಿಗಳು ಈ ಪುಸ್ತಕದಲ್ಲಿ ಇವೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow