ತಿರುಪತಿ ಲಡ್ಡು ಇತಿಹಾಸ ಮತ್ತು ಉತ್ಪಾದನೆ: ಭಕ್ತಾದಿಗಳು ಓದಲೇಬೇಕಾದ ಸ್ಟೋರಿ!

ಪ್ರತಿದಿನ ಲಕ್ಷಾಂತರನ್ನು ಭಕ್ತರನ್ನು ಆಕರ್ಷಿಸುವ ಏಕೈಕ ಹಿಂದೂ ದೇವಸ್ಥಾನವೆಂದರೆ ಅದುವೇ ತಿರುಮಲದಲ್ಲಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ.
ತಿರುಪತಿ ಎಂದಾಕ್ಷಣ ಕಣ್ಣಮುಂದೆ ಬರೋದು ಶ್ರೀವಾರಿಯ ಪ್ರಸಾದ ಲಡ್ಡು. ದೇವರ ದರ್ಶನ ಮಾಡಿ ಬಂದ ಪ್ರತಿಯೊಬ್ಬರೂ ಲಡ್ಡು ಸ್ವೀಕರಿಸದೆ ಮನೆಗೆ ಬರೋದಿಲ್ಲ. ಅಷ್ಟೇ ಏಕೆ ತಿರುಪತಿಗೆ ಸ್ನೇಹಿತರೋ, ಅಕ್ಕಪಕ್ಕದ ಮನೆಯವರೋ ಹೋಗುತ್ತಿದ್ದಾರೆಂದರೆ ನಮಗೂ ಒಂದೆರಡು ಲಡ್ಡು ತಂದುಕೊಡಿ ಅಂತಾರೆ. ಇನ್ನು ಎಷ್ಟೇ ಲಕ್ಷಾಂತರ ಭಕ್ತ ಸಮೂಹವಿದ್ದರೂ, ನೂಕುನುಗ್ಗಲಲ್ಲೇ ಕೆಲವೇ ನಿಮಿಷಗಳಿಗಾದರೂ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಹಂಬಲದಲ್ಲಿ ನಾನಾ ರಾಜ್ಯಗಳಿಂದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಲಡ್ಡು ಇಲ್ಲದೆ ತೀರ್ಥಯಾತ್ರೆ ಅಪೂರ್ಣ ಎಂಬಂತೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಲಡ್ಡು ಪ್ರಸಾದ ಖರೀದಿಸುತ್ತಾರೆ.
ಹಾಗಿದ್ರೆ ಬನ್ನಿ ತಿರುಪತಿ ಲಡ್ಡುವಿನ ಇತಿಹಾಸವೇನು? ತಿರುಪತಿ ಲಡ್ಡು ಮೊದಲ ಬಾರಿಗೆ ತಯಾರಾಗಿದ್ದು ಯಾವಾಗ? ಲಡ್ಡುವನ್ನೇ ಪ್ರಸಾದವಾಗಿ ನೀಡುವುದೇಕೆ? ಎಂಬ ಮಹತ್ವದ ಸಂಗತಿಯನ್ನು ತಿಳಿಯೋಣ.
ತಿರುಪತಿ ತಿಮ್ಮಪ್ಪನ ಪ್ರಸಾದವಾಗಿ ಲಡ್ಡುವನ್ನು ಕೈಗೆ ತೆಗೆದುಕೊಳ್ಳುವುದೇ ಒಂದು ಮಹಾ ಭಾಗ್ಯ ಅನ್ನಬಹುದು. ಅದರಲ್ಲೂ ತಿರುಪತಿ ದೇವಸ್ಥಾನದ ಪಾಕಶಾಲೆ ಸುತ್ತಮುತ್ತ ಓಡಾಡಿದರೆ ಸಾಕು ತುಪ್ಪ, ಡ್ರೈ ಫ್ರೂಟ್ಗಳ ಮಿಶ್ರಣದ ಘಮವು ಭಕ್ತರ ಬ್ರೈನ್ ಅನ್ನು ಆ್ಯಕ್ಟಿವೇಟ್ ಮಾಡಿಬಿಡುತ್ತೆ. ಒಂದು ಕ್ಷಣ ಅಲ್ಲೇ ನಿಂತು ಆ ಘಮವನ್ನು ಸ್ವಾದಿಸಬೇಕು ಅನಿಸುತ್ತದೆ. ಈ ಪರಿಮಳ ಆಘ್ರಾಣಿಸುವುದು ಮತ್ತೊಂದು ತೆರೆನಾದ ದಿವ್ಯ ಅನುಭವ ನೀಡುತ್ತದೆ. ಇನ್ನು ಆ ಮಹಾಪ್ರಸಾದ ಲಡ್ಡು ಕೈಯಲ್ಲಿಟ್ಟರೆ ಸಾಕು, ಷುಗರು-ಪೊಗರು ಇರುವುದನ್ನೂ ಮರೆತು ಲಡ್ಡು ಮುರಿದುಕೊಂಡು ಬಾಯಿಗೆ ಹಾಕಿಕೊಳ್ಳುವವರೆಗೂ ನಮ್ಮ ಬ್ರೈನ್ ಮಾತು ನಾವೇ ಕೇಳುವುದಿಲ್ಲ. ನೇರವಾಗಿ ಹೃದಯದಿಂದ ಕೇಳಿಬಂದ ಮಾತು ಅಲ್ಲಿ ಕೆಲಸ ಮಾಡಿರುತ್ತದೆ.
ಮೊದಲು ತಿಮ್ಮಪ್ಪನಿಗೆ ಪರಮ ಭಕ್ತಿಯಿಂದ ಒಂದು ನಮಸ್ಕಾರ ಹಾಕಿ ಅದನ್ನು ಕಣ್ಣಿಗೊತ್ತಿಕೊಂಡು ಬಾಯಿಗೆ ಹಾಕಿಕೊಂಡು ಆಸ್ವಾದಿಸುವಾಗ ಸಿಗುವ ಮಜ ಬೇರೆನೇ ಲೆವೆಲ್. ‘ಬಲ್ಲವನೇ ಬಲ್ಲ ಬೆಲ್ಲದ ರುಚಿಯ’ ಎಂಬಂತೆ ತಿಮ್ಮಪ್ಪನ ಸಕಲ ಭಕ್ತರಿಗೂ ಈ ದಿವ್ಯಾನುಭವದ ಪರಿಚಯವಿರುತ್ತದೆ.
ಇನ್ನು ಬಾಯಿಗೆ ಲಡ್ಡು ಇಟ್ಟ ತಕ್ಷಣ ಬಾಯ್ತುಂಬ ಪಸರಿಸಿ ಕರಗಿ ಆಗಾಗ ಸಿಗುವ ದಪ್ಪ ಸಕ್ಕರೆ, ದ್ರಾಕ್ಷಿ, ಗೋಡಂಬಿ, ಏಲಕ್ಕಿಯು ಮನಸಿನಲ್ಲಿ ಆಧ್ಯಾತ್ಮದ ಜ್ಯೋತಿ ಬೆಳಗಿಸಿದಂತಿರುತ್ತೆ. ನಾಲ್ಕೈದು ತಾಸು ಸರತಿ ಸಾಲಿನಲ್ಲಿ ನಿಂತು ಅಲ್ಲಲ್ಲಿ ಜೈಲಿನಲ್ಲಿರುವಂತೆ ಬ್ಯಾರಿಕೇಡ್ಗಳಲ್ಲಿ ಬಂಧಿಯಾಗಿ ನೂಕುನುಗ್ಗಲಿನಲ್ಲೂ ಶ್ರೀನಿವಾಸನ ದರ್ಶನ ಮಾಡಿ ಬಂದ ಭಕ್ತರಿಗೆ ಪ್ರಸಾದವಾಗಿ ಸಿಗುವ ಲಡ್ಡು ತನ್ನದೇ ಆದ ಮಹತ್ವವನ್ನು ಹೊಂದಿದೆ.
ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾದ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ತಿರುಪತಿ ಲಡ್ಡುಗೆ ಸುಮಾರು 310 ವರ್ಷಗಳ ಇತಿಹಾಸ ಇದೆ. 1715ರಲ್ಲಿ ತಿರುಮಲೇಶನಿಗೆ ಲಡ್ಡು ನೈವೇದ್ಯ, ಪ್ರಸಾದ ನೀಡಲು ಆರಂಭಿಸಲಾಯಿತು. ಆದರೆ ಆರಂಭದಲ್ಲಿ ಅದು ಈಗಿನ ಲಡ್ಡು ಸ್ವರೂಪದಲ್ಲಿ ಇರಲಿಲ್ಲ. 1803ರಲ್ಲಿ ಆಗಿನ ಮದ್ರಾಸ್ ಸರ್ಕಾರದಿಂದ ಮೊದಲ ಬಾರಿಗೆ ದೇವಸ್ಥಾನದಲ್ಲಿ ಬೂಂದಿ ಪ್ರಸಾದ ವಿತರಣೆ ಮಾಡಲಾಯ್ತು. ಪಲ್ಲವರ ಕಾಲದಿಂದಲೇ ಪ್ರಸಾದ ಪರಂಪರೆ ಇದೆ ಅನ್ನೋ ಬಗ್ಗೆ ಮಾಹಿತಿ ಇದೆ. ಪಲ್ಲವರ ಕಾಲದಲ್ಲೇ ಶ್ರೀವಾರಿಗೆ ನೈವೇದ್ಯ ಸಲ್ಲಿಕೆ ಸಮಯ ನಿಗದಿ ಮಾಡಲಾಗಿತ್ತು.
ಮುಖ್ಯವಾಗಿ, ಏಳು ಬೆಟ್ಟದ ತಿರುಮಲದಲ್ಲಿ ದೂರದೂರುಗಳಿಂದ ಸರಿಯಾದ ಸಂಚಾರ ವ್ಯವಸ್ಥೆ ಇಲ್ಲದೆ ಪ್ರಯಾಸಪಟ್ಟು ಬರುವ ಭಕ್ತರಿಗೆ ಭೋಜನ ವ್ಯವಸ್ಥೆ ಇಲ್ಲದ ಕಾರಣ ದೇವಸ್ಥಾನದ ವತಿಯಿಂದ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಲಡ್ಡು ಪ್ರಸಾದ ತಿಂದೇ ಭಕ್ತ ಜನರು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಈ ಪ್ರಸಾದಕ್ಕೆ ಮೊದಲು ‘ತಿರುಪ್ಪೊಂಗಂ’, ‘ಸುಖೀಯಂ ಮನೋಹರಪಡಿ’ ಎಂಬ ಹೆಸರು ಇತ್ತು. ವಡೆ ಹೊರತುಪಡಿಸಿ ಬೇರೆ ಆಹಾರ ಹೆಚ್ಚು ದಿನ ಇರುತ್ತಿರಲಿಲ್ಲ. ಹೀಗಾಗಿ ತಿರುಮಲದ ಭಕ್ತರಲ್ಲಿ ವಡೆಗೆ ಹೆಚ್ಚು ಡಿಮ್ಯಾಂಡ್ ಶುರುವಾಗಿತ್ತು. “ತಿರುಮಲೈ ಕು ವಡೈ ಅಳಗು” (ತಿರುಮಲಕ್ಕೆ ವಡೆಯೇ ಶೋಭೆ) ಎಂಬಂತೆ ಆಗ ತಿರುಪತಿ ವಡೆ ಫೇಮಸ್ ಆಗಿತ್ತು. ಪೊಂಗಲ್ ಅನ್ನು ಕೂಡ ನೈವೇದ್ಯವಾಗಿ ವಿತರಿಸಿದ್ದಕ್ಕೆ ದಾಖಲೆಗಳಿವೆ
1940ರಿಂದ ಪ್ರಸಾದವಾಗಿ ಭಕ್ತರ ಕೈಗೆ ಲಡ್ಡು ಸೇರ್ಪಡೆ ಆಯ್ತು. 1933ರಲ್ಲಿ ತಿರುಪತಿ ದೇಗುಲ ಧರ್ಮದತ್ತಿ ಮಂಡಳಿ ಸ್ಥಾಪನೆ ಮಾಡಲಾಯ್ತು. ಮುಂದೆ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ -ಟಿಟಿಡಿ ಸ್ಥಾಪನೆಗೊಂಡಿತು. ಅಲ್ಲಿಂದ ಮುಂದೆ, ಟಿಟಿಡಿ ಸಾರಥ್ಯದಲ್ಲಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದ ವಿತರಣೆ ಹೆಚ್ಚಳವಾಯ್ತು. ಅಲ್ಲಿಗೆ, 1940ರಿಂದ ಬೂಂದಿಯನ್ನ ಲಡ್ಡು ಮಾಡಿ ಹಂಚುವ ಕಾರ್ಯ ಶುರುವಾಯ್ತು ಅನ್ನಬಹುದು.
ತೀರಾ ಇತ್ತೀಚೆಗೆ 2014ರಲ್ಲಿ ಲಡ್ಡುಗೆ ಭೌಗೋಳಿಕ ಗುರುತಿನ ಸ್ಥಾನಮಾನ ನೀಡಲಾಯ್ತು. ಇನ್ನು ತಿಮ್ಮಪ್ಪನ ದರ್ಶನ ಮಾಡಿ ಬರುತ್ತಿದ್ದಂತೆಯೇ ಅಲ್ಲೇ ತಿನ್ನಲು ಚಿಕ್ಕ ಲಡ್ಡು ಪ್ರಸಾದವನ್ನು ಉಚಿತವಾಗಿ ನೀಡಲಾಗುತ್ತೆ. ಬಳಿಕ ಸರತಿ ಸಾಲಿನಲಿ ನಿಂತು ಕೌಂಟರ್ಗಳಲ್ಲಿ ನಮಗೆ ಬೇಕಾದಷ್ಟು ಲಡ್ಡುಗಳನ್ನು ನಾವು ಖರೀದಿ ಮಾಡಬಹುದು. ತಿಮ್ಮಪ್ಪನ ಸನ್ನಿಧಿಯಲ್ಲಿ 29 ಕೌಂಟರ್ಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಗಾತ್ರದ ಲಡ್ಡುಗಳನ್ನ ಮಾರಾಟ ಮಾಡಲಾಗುತ್ತೆ. ಮಧ್ಯಮ ಗಾತ್ರದ ಲಡ್ಡುವಿಗೆ 50 ರೂಪಾಯಿ, ದೊಡ್ಡ ಗಾತ್ರ ಲಾಡುಗೆ 200 ರೂಪಾಯಿ ನಿಗದಿ ಮಾಡಲಾಗಿದೆ.
ನಿತ್ಯ 3 ಲಕ್ಷ ಲಡ್ಡುಗಳನ್ನ ತಯಾರಿಸ್ತಿದ್ದು, ಲಡ್ಡುವಿನ ವಾರ್ಷಿಕ ಆದಾಯವೇ 500 ಕೊಟಿ ರೂ ಇದೆ. ಇನ್ನು ಎಲ್ಲ ಭಕ್ತರಿಗೆ ಉಚಿತವಾಗಿ ತಲಾ ಒಂದು ಲಡ್ಡು ನೀಡಲಾಗುತ್ತೆ. ಬಳಿಕ ಭಕ್ತರು ತಮಗೆ ಎಷ್ಟು ಲಡ್ಡು ಬೇಕೋ ಅಷ್ಟು ಲಡ್ಡುವನ್ನು ಖರೀದಿಸಬಹುದು. ತಿರುಪತಿ ಲಡ್ಡು ತಯಾರಿಸುವುದು ಹೇಗೆ?
ತಿರುಪತಿ ಲಡ್ಡು ಮಾರಾಟದಿಂದ ಟಿಟಿಡಿಗೆ ವರ್ಷಕ್ಕೆ ₹500 ಕೋಟಿ ಆದಾಯ ಬರ್ತಿದೆ. ಇಲ್ಲಿ ಲಡ್ಡು ತಯಾರಿಕೆಗಾಗಿಯೇ ವಿಶೇಷ ಅಡುಗೆ ಮನೆಗಳಿವೆ. ಈ ಹಿಂದೆ ಆರಂಭದಲ್ಲಿ “ಪೋಟು” ಅನ್ನು ಸ್ಥಾಪಿಸಿ ಅವುಗಳಲ್ಲಿ ಲಡ್ಡು ತಯಾರಿಸಲಾಗುತ್ತಿತ್ತು. ಇದನ್ನು ಸಾಮಾನ್ಯವಾಗಿ “ದಿ ಲಾರ್ಡ್ಸ್ ಕಿಚನ್” ಎಂದು ಕರೆಯಲಾಗುತ್ತದೆ, ಈ ಪೋಟುಗಳಲ್ಲಿ ಪ್ರಸಾದವನ್ನು ಉರುವಲುಗಳಿಂದ ಅಂದರೆ ಕಟ್ಟಿಗೆಗಳನ್ನು ಬಳಸಿ ಒಲೆಯಲ್ಲಿ ತಯಾರಿಸಲಾಗುತ್ತಿತ್ತು. 1984ರಿಂದ ಪ್ರತಿದಿನ ಅಗತ್ಯವಿರುವ ಲಡ್ಡುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಎಲ್ಪಿಜಿ ಬಳಕೆ ಪ್ರಾರಂಭವಾಯಿತು.
ಮತ್ತೊಂದೆಡೆ ತಿರುಪತಿ ಲಡ್ಡುವನ್ನು ವಿಶೇಷ ವಿಧಾನದ ಮೂಲಕ ತಯಾರಿಸಲಾಗುತ್ತದೆ. ಈ ತಯಾರಿಕಾ ವಿಧಾನವನ್ನು ದಿಟ್ಟಂ ಎಂದು ಕರೆಯಲಾಗುತ್ತದೆ. ಇದು ಪ್ರಸಾದವನ್ನು ತಯಾರಿಸಲು ಬಳಸುವ ಪದಾರ್ಥಗಳ ಪಟ್ಟಿ ಮತ್ತು ಅವುಗಳ ಪ್ರಮಾಣವನ್ನು ಒಳಗೊಂಡಿರುತ್ತದೆ. ದಿಟ್ಟಂ ಅನ್ನು ಇದುವರೆಗಿನ ಇತಿಹಾಸದಲ್ಲಿ ಕೇವಲ 6 ಬಾರಿ ಬದಲಾಯಿಸಲಾಗಿದೆ. ಅಂದರೆ ತಿಮ್ಮಪ್ಪನ ಲಡ್ಡು ರುಚಿಯು ಆರು ಬಾರಿ ಮಾರ್ಪಾಡುಗೊಂಡಿದೆ.
ಇನ್ನು 5,100 ಲಡ್ಡು ತಯಾರಿಗೆ 803 ಕೆಜಿ ಪದಾರ್ಥಗಳನ್ನ ಬಳಸುತ್ತಾರೆ. ಹಸುವಿನ ತುಪ್ಪ 165 ಕೆಜಿ, ಕಡಲೆಹಿಟ್ಟು 180 ಕೆಜಿ, ಸಕ್ಕರೆ 400 ಕೆಜಿ, ಒಣದ್ರಾಕ್ಷಿ 18 ಕೆಜಿ, ಕಲ್ಲು ಸಕ್ಕರೆ 8 ಕೆಜಿ, ಏಲಕ್ಕಿ 4 ಕೆಜಿ, ಗೋಡಂಬಿ 30 ಕೆಜಿ ಬಳಸಲಾಗುತ್ತೆ. ನಿತ್ಯವೂ 15 ಟನ್ ತುಪ್ಪ ಬಳಕೆ ಮಾಡಿಕೊಂಡು ಲಡ್ಡು ತಯಾರಿ ಮಾಡಲಾಗುತ್ತೆ. ವರ್ಷಕ್ಕೆ ಸುಮಾರು 5 ಸಾವಿರ ಮೆಟ್ರಿಕ್ ಟನ್ ತುಪ್ಪ ಖರೀದಿಸಲಾಗುತ್ತೆ.
ತಿಂಗಳಿಗೆ 1 ಕೋಟಿಗೂ ಹೆಚ್ಚು ಲಡ್ಡುಗಳನ್ನ ಮಾರಾಟ ಮಾಡಲಾಗುತ್ತೆ. ನಿತ್ಯ ಸುಮಾರು 3ರಿಂದ 3.20 ಲಕ್ಷ ಲಡ್ಡುಗಳನ್ನ ತಯಾರಿಸಲಾಗುತ್ತೆ. ಲಡ್ಡು ಪೊಟ್ಟು ಎಂದು ಕರೆಯಲಾಗುವ ದೇವಸ್ಥಾನದ ಅಡುಗೆ ಕೋಣೆಮನೆಗಳಲ್ಲಿ 3 ಶಿಫ್ಟ್‌ಗಳಲ್ಲಿ 600ಕ್ಕೂ ಹೆಚ್ಚು ಅಡುಗೆ ಸಿಬ್ಬಂದಿ ಕೆಲಸ ಮಾಡ್ತಾರೆ. ಇದರಲ್ಲಿ 150 ಕಾರ್ಮಿಕರು ಖಾಯಂ ಆಗಿದ್ರೆ, 350 ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡ್ತಾರೆ. ಗುತ್ತಿಗೆ ಕಾರ್ಮಿಕರ ಪೈಕಿ 247 ಜನರು ಅಡುಗೆ ಭಟ್ಟರು ಇದ್ದು, ಟಿಟಿಡಿ ಗಾಗಿ ನಿತ್ಯ ಸರಾಸರಿ 3 ಲಕ್ಷ ಲಡ್ಡು ತಯಾರಿಸಿ ಕೊಡುತ್ತಾರೆ
ಒಟ್ಟಾರೆಯಾಗಿ 8 ಲಕ್ಷ ಲಡ್ಡುಗಳನ್ನ ತಯಾರಿಸುವ ಸಾಮರ್ಥ್ಯವಿರುವ ಮನೆ ಇದಾಗಿದೆ. ಒಂದು ಚಿಕ್ಕ ಲಡ್ಡು ತಯಾರಿಗೆ ಒಟ್ಟು 43 ರೂಪಾಯಿ ಖರ್ಚಾಗುತ್ತೆ. ಚಿಕ್ಕ ಲಡ್ಡು 160 ರಿಂದ 180 ಗ್ರಾಂ ಇರುತ್ತೆ. ಇದರ ಬೆಲೆ 50 ರೂಪಾಯಿ. ದೊಡ್ಡ ಲಡ್ಡು 600 ಗ್ರಾಂ ಇರುತ್ತೆ. ಇದರ ಬೆಲೆ 200 ರೂಪಾಯಿ ಆಗಿದೆ. ಮತ್ತೊಂದೆಡೆ ಇವೆಲ್ಲ ಒಂದು ಕಡೆಯಾದ್ರೆ ಕಲ್ಯಾಣೋತ್ಸವಂ, ಬ್ರಹ್ಮೋತ್ಸವದಂತಹ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೀತಿಯ ಲಡ್ಡುಗಳನ್ನು ತಯಾರಿಸಿ ವಿತರಿಸಲಾಗುತ್ತೆ.
2018 ರಲ್ಲಿ, ಬ್ರಹ್ಮೋತ್ಸವಂ ನಡೆದ ಒಂದೇ ದಿನದಲ್ಲಿ ದಾಖಲೆ ಮಟ್ಟದಲ್ಲಿ 5,13,566 ಲಡ್ಡುಗಳು ಮಾರಾಟವಾಗಿದ್ದವು.
ಇನ್ನು ಇಲ್ಲಿ ಗಮನಿಸುವ ವಿಷಯವೆಂದರೆ ಪ್ರಾಚೀನ ಶಾಸನಗಳ ಪ್ರಕಾರ ಲಡ್ಡು ಅಸ್ತಿತ್ವದಲ್ಲಿ ಇದ್ದುದ್ದನ್ನು 1480 ರಲ್ಲಿ ದಾಖಲಿಸಲಾಗಿದೆ ಮತ್ತು ಇದನ್ನು “ಮನೋಹರಂ” ಎಂದು ಕರೆಯಲಾಗಿದೆ. ತಿರುಮಲೈ ಓಝುಗು, ತಿರುಮಲ ತಿರುಪತಿ ದೇವಸ್ಥಾನಂ ದಿಟ್ಟಂ, ದಿ ಸ್ಟೋರೀಸ್ ಆಫ್ ತಿರುಪತಿ ಪುಸ್ತಕ ಸೇರಿದಂತೆ ತಮಿಳು ಭಾಷೆಯ ಸಾಹಿತ್ಯಗಳಲ್ಲಿ ತಿರುಪತಿ ಲಡ್ಡು ಬಗೆಗಿನ ಉಲ್ಲೇಖಗಳನ್ನು ಕಾಣಬಹುದು.
ಲಡ್ಡು ಪ್ರಸಾದವನ್ನು ಹೊಟ್ಟೆ ತುಂಬಾ ತಿನ್ನಬಾರದು ಅನ್ನುತ್ತಾರೆ! ಯಾಕೆ?
ಇನ್ನು ಯಾವುದೇ ದೇವರ ಪ್ರಸಾದವಾಗಲಿ ಅದನ್ನು ಹೊಟ್ಟೆ ತುಂಬಾ ತಿನ್ನಬಾರದು ಎಂದು ಹೇಳಲಾಗುತ್ತೆ. ಅದರಲ್ಲೂ ತಿಮ್ಮಪ್ಪನ ಲಡ್ಡು ವಿಚಾರದಲ್ಲಿ ಇದನ್ನು ವಿಶೇಷವಾಗಿ ಹೇಳಲಾಗುತ್ತದೆ. ಏನೆಂದರೆ ಪ್ರಸಾದವಾಗಿ ಲಡ್ಡುವನ್ನು ಹೊಟ್ಟೆಗೆ ತೆಗೆದುಕೊಂಡಾಗ ಹೊಟ್ಟೆ ಸೇರಿ ಜೀರ್ಣವಾಗುವಷ್ಟು ಅದನ್ನು ತಿನ್ನಬಾರದು ಅನ್ನುತ್ತಾರೆ. ಬದಲಿಗೆ ತಿಂದ ಪ್ರಸಾದ ದೇಹದಲ್ಲಿಯೇ ಜೀರ್ಣವಾಗಬೇಕು. ಮಾರನೆಯ ದಿನ ವಿಸರ್ಜನೆಯಾಗಿ ಬರಬಾರದು ಎಂಬುದು ಇದರ ತಾತ್ಪರ್ಯ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






