ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ: ಸುಪ್ರೀಂಗೆ ಅರ್ಜಿ, ನಾಳೆ ವಿಚಾರಣೆ
ನವದೆಹಲಿ: ವಿಶ್ವವಿಖ್ಯಾತ ಮೈಸೂರು ದಸರಾ–2025ರ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಸೆಪ್ಟೆಂಬರ್ 22ರಂದು ದಸರಾ ಉತ್ಸವ ಆರಂಭವಾಗಲಿದ್ದು, ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂದು ಅರ್ಜಿದಾರರ ಪರ ವಕೀಲರು ಒತ್ತಾಯಿಸಿದರು. ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಮಾಡಲು ಹಿಂದೂಯೇತರ ವ್ಯಕ್ತಿಗೆ ಅವಕಾಶ ನೀಡಿರುವುದು ಅಲ್ಲಿನ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ವಾದಿಸಲಾಯಿತು. ಪ್ರತಿಕ್ರಿಯಿಸಿದ ಸಿಜೆಐ ಬಿ.ಆರ್. ಗವಾಯಿ ಅವರು ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
ವಿವಾದಕ್ಕೆ ಕಾರಣ: ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಕರನ್ನಾಗಿ ಆಹ್ವಾನಿಸಿರುವುದಕ್ಕೆ ಕನ್ನಡಪರ ಹಾಗೂ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮುಷ್ತಾಕ್ ಅವರು ಹಿಂದಿನ ದಿನಗಳಲ್ಲಿ ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಿಂದ ವಿವಾದ ಉಂಟಾಗಿದೆ.
ಹೈಕೋರ್ಟ್ ತೀರ್ಪು: ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್ ಇದೇ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಜಾ ಮಾಡಿತ್ತು. ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರ ಮನವಿಗಳನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಉಲ್ಲಂಘನೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿತ್ತು. ರಾಜ್ಯ ಸರ್ಕಾರ ಆಯೋಜಿಸುವ ಕಾರ್ಯಕ್ರಮವನ್ನು ಬೇರೆ ಧರ್ಮದ ವ್ಯಕ್ತಿಯೊಬ್ಬರು ಉದ್ಘಾಟಿಸುವುದರಿಂದ ಸಂವಿಧಾನ ಮೌಲ್ಯಗಳು ಉಲ್ಲಂಘನೆಯಾಗುತ್ತವೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ಹೇಳಿತ್ತು.
ನಿಮ್ಮ ಪ್ರತಿಕ್ರಿಯೆ ಏನು?