ಪೂಜೆ ವೇಳೆ ದೀಪ ಬೆಳಗುವವರು ಈ ನಿಯಮಗಳನ್ನು ತಪ್ಪದೇ ಪಾಲಿಸಿ!

ಎಪ್ರಿಲ್ 22, 2025 - 07:09
 0  15
ಪೂಜೆ ವೇಳೆ ದೀಪ ಬೆಳಗುವವರು ಈ ನಿಯಮಗಳನ್ನು ತಪ್ಪದೇ ಪಾಲಿಸಿ!

ನಾವು ದೀಪಗಳನ್ನು ಬೆಳಗುವುದಕ್ಕೆ ಸಾಕಷ್ಟು ಸಂಪ್ರದಾಯಗಳು ಸಾಥ್‌ ನೀಡುತ್ತದೆ. ದೀಪಾವಳಿ ಹಬ್ಬದ ದಿನದಂದು ಮಾತ್ರವಲ್ಲ, ಪ್ರತಿಯೊಂದು ದಿನವೂ ನಾವು ಮನೆಯಲ್ಲಿ ದೇವರಿಗೆ ದೀಪವನ್ನು ಬೆಳಗುತ್ತೇವೆ. ದೀಪಗಳ ಬೆಳಕು ಆಕಾಶ, ಭೂಮಿ ಎರಡನ್ನೂ ಪ್ರಕಾಶಮಾನವಾಗಿ ಮಾಡುತ್ತದೆ. ದೀಪವನ್ನು ಬೆಳಗಿಸುವ ಮೂಲಕ ಮನೆಯನ್ನು ಬೆಳಗಿಸುವುದು ಮಾತ್ರವಲ್ಲ, ಬೆಳಕಿನಿಂದ ಕತ್ತಲೆಯನ್ನು ಕೂಡ ದೂರ ಮಾಡಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ದೀಪವನ್ನು ಬಳಗಿಸುವುದು ಮಹತ್ತರವಾದ ಸ್ಥಾನವನ್ನು ಪಡೆದುಕೊಂಡಿದೆ. 

ಹಿಂದೂ ಮನೆಗಳಲ್ಲಿ ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯ ಈಗಲೂ ಇದೆ. ಆದರೆ ದೀಪಗಳನ್ನು ಬೆಳಗಿಸಲು ಕೆಲವು ನಿಯಮಗಳಿವೆ, ಹೆಚ್ಚಿನ ಜನರು ಆ ನಿಯಮಗಳನ್ನು ಅನುಸರಿಸುವುದಿಲ್ಲ, ಇದರಿಂದಾಗಿ ಅವರು ಪೂಜೆಯ ಶುಭ ಫಲಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮಾಡಿದ ಪೂಜೆಯ ಪೂರ್ಣ ಫಲಿತಾಂಶ ಪಡೆಯಲು, ದೀಪವನ್ನು ಬೆಳಗಿಸುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೂಡ ಪಾಲನೆ ಮಾಡಬೇಕಾಗುತ್ತದೆ. ಹೇಗೆ? ನಿಯಮಗಳೇನು? ಇಲ್ಲಿದೆ ಮಾಹಿತಿ.

ಪೂಜೆಯ ಸಮಯದಲ್ಲಿ ಬೆಳಗುವ ದೀಪವು ಸ್ವಚ್ಛ ಮತ್ತು ಅಚ್ಚುಕಟ್ಟಾಗಿರಬೇಕು. ಏಕೆಂದರೆ ಕೆಲವರು ಮುರಿದ ಹಣತೆಗಳನ್ನು ದೀಪ ಹಚ್ಚಲು ಬಳಸುತ್ತಾರೆ. ಇದು ಶುಭವಲ್ಲ. ಪೂಜೆಯಲ್ಲಿ ಮುರಿದ ದೀಪವನ್ನು ಬಳಸುವುದು ಅಶುಭ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಈ ನಿಯಮವನ್ನು ಮರೆಯಬೇಡಿ. ಪೂಜೆಯ ಆರಂಭದಲ್ಲಿ ನೀವು ದೀಪವನ್ನು ಬೆಳಗಿಸಿದಾಗ, ದೀಪದಲ್ಲಿ ಸೂಕ್ತ ಪ್ರಮಾಣದ ತುಪ್ಪ ಅಥವಾ ಎಣ್ಣೆ ಇರುವಂತೆ ವಿಶೇಷ ಕಾಳಜಿ ವಹಿಸಿ, ಇದರಿಂದ ಪೂಜೆ ಮುಗಿಯುವ ಮೊದಲು ದೀಪವು ಆರಿ ಹೋಗುವುದಿಲ್ಲ. ಪೂಜೆಯ ಮಧ್ಯದಲ್ಲಿ ದೀಪವನ್ನು ಆರಿಸುವುದು ಕೆಟ್ಟ ಶಕುನ ಹಾಗಾಗಿ ತುಪ್ಪವಿರಲಿ ಅಥವಾ ಎಣ್ಣೆಯಿರಲಿ ಬೇಕಾಗುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ದೀಪ ಹಚ್ಚಿ.

ಪೂಜಾ ದೀಪದ ಹೊರತಾಗಿ ಬೇರೆ ಯಾವುದೇ ದೀಪ ಅಥವಾ ಧೂಪವನ್ನು ಬೆಳಗಿಸಬಾರದು ಎಂದು ನಂಬಲಾಗಿದೆ. ಅಲ್ಲದೆ ಪೂಜೆಯ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿದ ನಂತರ, ತಕ್ಷಣವೇ ಮತ್ತೊಂದು ಎಣ್ಣೆ ದೀಪವನ್ನು ಬೆಳಗಿಸಬೇಡಿ. ದೀಪವನ್ನು ಯಾವಾಗಲೂ ಪೂಜಾ ಸ್ಥಳದ ಮಧ್ಯದಲ್ಲಿ ಅಥವಾ ದೇವರ ವಿಗ್ರಹದ ಮುಂದೆ ಇಡಬೇಕು.

ನೀವು ತುಪ್ಪದ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಎಡಭಾಗದಲ್ಲಿ ಇರಿಸಿ ಅಥವಾ ನೀವು ಎಣ್ಣೆ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಬಲಭಾಗದಲ್ಲಿ ಇರಿಸಿ. ಏಕೆಂದರೆ ಇದರಿಂದ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಇನ್ನು ಎಣ್ಣೆ ದೀಪದಲ್ಲಿ ಕೆಂಪು ಬತ್ತಿಯನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ ಹಾಗೂ ಮನೆಯಲ್ಲಿ ಬಳಸುವ ದೀಪಕ್ಕೆ ಹತ್ತಿಯ ಬತ್ತಿ ಸೂಕ್ತ ಎಂದು ಹೇಳಲಾಗುತ್ತದೆ. ಆದರೆ ಪೂಜಾ ಸ್ಥಳದಲ್ಲಿ ದೀಪವನ್ನು ಎಂದಿಗೂ ಪಶ್ಚಿಮ ದಿಕ್ಕಿನಲ್ಲಿ ಇಡಬಾರದು ಇದನ್ನು ಮರೆಯಬೇಡಿ. ಹಾಗೆ ಮಾಡುವುದರಿಂದ ಆರ್ಥಿಕ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಮೇಲೆ ಹೇಳಿರುವ ನಿಯಮಗಳನ್ನು ಸರಿಯಾಗಿ ಪಾಲಿಸಿ ನಿಮ್ಮ ಪೂಜಾ ಫಲವನ್ನು ಸಂಪೂರ್ಣವಾಗಿ ಪಡೆಯಿರಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow