ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಪೋಕ್ಸೊ ಕೇಸ್ ಆರೋಪಿ ಆತ್ಮಹತ್ಯೆ!
ಬೆಂಗಳೂರು: ಕೋರ್ಟ್ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಪೋಕ್ಸೋ ಕೇಸ್ ಆರೋಪಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಪೋಕ್ಸೋ ಕೇಸ್ನಲ್ಲಿ ಬಂಧಿತನಾಗಿದ್ದ ಆರೋಪಿ ಗೌತಮ್ ಎಂಬಾತ ಕೋರ್ಟ್ ಕಟ್ಟಡದ 5 ನೇ ಫ್ಲೋರ್ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗೌತಮ್ ಆಡುಗೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ತಿಂಗಳು ದಾಖಲಾದ ಪೋಕ್ಸೋ ಪ್ರಕರಣದ ಆರೋಪಿಯಾಗಿದ್ದ. ಈ ಪ್ರಕರಣದಲ್ಲಿ ದೂರು ದಾಖಲಾಗಿದ್ದು, ಗೌತಮ್ ವಿರುದ್ಧ ಸೆಕ್ಷನ್ 6 ಮತ್ತು 10 ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಾಗಿತ್ತು.
ಬಂಧನದ ನಂತರ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲ್ಪಟ್ಟ ಆತನನ್ನು ಇಂದು ಮೊದಲ ಟ್ರಯಲ್ಗೆ ಹಾಜರಾಗಲು ಪೊಲೀಸ್ ಜೀಪ್ನಲ್ಲಿ ಕೋರ್ಟ್ಗೆ ಕರೆತರಲಾಗಿತ್ತು, ಆದರೆ ಈ ವೇಳೆ ಕೈನಿಂದ ಕೋಳಗಳನ್ನು ತೆಗೆದ ಕೂಡಲೇ ಐದನೇ ಮಹಡಿಯಿಂದ ಹಾರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಘಟನೆಯಿಂದ ಕೋರ್ಟ್ ಸಿಬ್ಬಂದಿ, ಪೊಲೀಸರು ಮತ್ತು ಸಾರ್ವಜನಿಕರಲ್ಲಿ ಆತಂಕ ಹರಡಿದ್ದು, ಪೊಲೀಸರು ತನಿಖೆಗೆ ತೊಡಗಿದ್ದಾರೆ. ಸಿಟಿ ಸಿವಿಲ್ ಘಟನೆ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?