ಭಾರತದ ಗ್ರಾಮೀಣ ಭಾಗದ ಜನರ ಆದಾಯ ಗಣನೀಯ ಏರಿಕೆ: ಸಮೀಕ್ಷೆಯಿಂದ ಬಹಿರಂಗ!

ಅಕ್ಟೋಬರ್ 16, 2024 - 08:22
 0  9
ಭಾರತದ ಗ್ರಾಮೀಣ ಭಾಗದ ಜನರ ಆದಾಯ ಗಣನೀಯ ಏರಿಕೆ: ಸಮೀಕ್ಷೆಯಿಂದ ಬಹಿರಂಗ!

ನವದೆಹಲಿ:- ಭಾರತದ ಗ್ರಾಮೀಣ ಭಾಗದ ಜನರ ಆದಾಯ ಗಣನೀಯ ಏರಿಕೆ ಆಗುತ್ತಿದೆ ಎಂದು ನಬಾರ್ಡ್ ಸಮೀಕ್ಷೆ ತಿಳಿಸಿದೆ. 

2019 ರಿಂದ ಅಂದರೆ ಕಳೆದ ಐದು ವರ್ಷದಲ್ಲಿ ಗ್ರಾಮೀಣ ಕುಟುಂಬಗಳ ಸರಾಸರಿ ಮಾಸಿಕ ಆದಾಯದಲ್ಲಿ ಶೇ. 58ರಷ್ಟು ಹೆಚ್ಚಳವಾಗಿದೆ. ಶೇ. 9.5ರ ಸಿಎಜಿಆರ್ ದರದಲ್ಲಿ ಆದಾಯ ಬೆಳೆದಿದೆ. 2016-17ರಲ್ಲಿ ಗ್ರಾಮೀಣ ಭಾಗದ ಒಂದು ಕುಟುಂಬದ ಸರಾಸರಿ ಮಾಸಿಕ ಆದಾಯ 8,059 ರೂ ಇತ್ತು. 2021-22ರಲ್ಲಿ ಇದು 12,698 ರೂಗೆ ಏರಿದೆ ಎಂದು ಈ ಸಮೀಕ್ಷೆಯ ಅಂಶಗಳನ್ನು ಉಲ್ಲೇಖಿಸಿ ಹಣಕಾಸು ಸಚಿವಾಲಯ ಹೇಳಿದೆ.

ಗ್ರಾಮೀಣ ಭಾಗದಲ್ಲಿ ಕೃಷಿ ಕಸುಬು ಮಾಡುವ ಕುಟುಂಬದ ಆದಾಯವು ಇತರಿಗಿಂತ ತುಸು ಹೆಚ್ಚಿದೆ. ಕೃಷಿ ಮಾಡುವ ಕುಟುಂಬಗಳ ಸರಾಸರಿ ಮಾಸಿಕ ಆದಾಯ 13,661 ರೂ ಇದೆ. ಕೃಷಿಯೇತರ ಆದಾಯ ಇರುವ ಗ್ರಾಮೀಣ ಭಾಗದ ಕುಟುಂಬಗಳ ಸರಾಸರಿ ಮಾಸಿಕ ಆದಾಯ 11,438 ರೂ ಇದೆ.

ಕೃಷಿಕ ಕುಟುಂಬಗಳಲ್ಲಿ, ಕೃಷಿಯಿಂದ ಬರುವ ಆದಾಯ ಮೂರನೇ ಒಂದು ಭಾಗದಷ್ಟಾಗುತ್ತದೆ. ಸರ್ಕಾರೀ ಅಥವಾ ಖಾಸಗಿ ಸೇವೆಗಳಿಂದ ಶೇ. 25ರಷ್ಟು ಆದಾಯ ಬರುತ್ತಿದೆ. ಕೂಲಿಯಿಂದ ಶೇ. 15, ಇತರ ಉದ್ದಿಮೆ ಮೂಲಕ ಶೇ. 15ರಷ್ಟು ಆದಾಯವು ಗ್ರಾಮೀಣ ಕುಟುಂಬಗಳಿಗೆ ಹೋಗುತ್ತಿದೆ. ಆದರೆ, ಗ್ರಾಮೀಣ ಭಾಗದ ಒಟ್ಟಾರೆ ಆದಾಯದಲ್ಲಿ ಶೇ. 37ರಷ್ಟು ಮೊತ್ತವು ಸಂಬಳ ನೀಡುವ ಉದ್ಯೋಗಗಳಿಂದ ಬರುತ್ತಿದೆ ಎಂದು ಈ ಸಮೀಕ್ಷೆಯ ಅಂಶಗಳು ಹೇಳುತ್ತಿವೆ.

ಗ್ರಾಮೀಣ ಭಾಗದ ಕುಟುಂಬಗಳ ಆದಾಯವು ಐದು ವರ್ಷದಲ್ಲಿ ಶೇ. 58ರಷ್ಟು ಹೆಚ್ಚಳವಾಗಿದೆಯಾದರೂ, ಅವುಗಳ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. 2016-17ರಲ್ಲಿ ಸರಾಸರಿ ಮಾಸಿಕ ವೆಚ್ಚ 6,646 ರೂ ಮಾತ್ರವೇ ಇತ್ತು. ಇದು 2021-22ರಲ್ಲಿ 11,262 ರೂಗೆ ಏರಿಕೆ ಆಗಿದೆ. ಗೋವಾ ಮತ್ತು ಜಮ್ಮು-ಕಾಶ್ಮೀರದಲ್ಲಿ ಇದು 17,000 ರೂನಷ್ಟು ಅಧಿಕ ಮಟ್ಟದಲ್ಲಿದೆ.

ಗ್ರಾಮೀಣ ಭಾಗದವರಿಗೆ ಬಲ ಒದಗಿಸಿರುವ ಯೋಜನೆಗಳು…
ಗ್ರಾಮೀಣ ಭಾಗದ ಶೇ. 44ರಷ್ಟು ಕುಟುಂಬಗಳ ಬಳಿ ಕಿಸಾನ್ ಕ್ರೆಡಿಟ್ ಕಾರ್ಡ್ ಇದೆ.
ಇನ್ಷೂರೆನ್ಸ್ ಸೌಲಭ್ಯ ಹೊಂದಿರುವ ಕುಟುಂಬಗಳ ಪ್ರಮಾಣ ಐದು ವರ್ಷದಲ್ಲಿ ಶೇ. 25.5ರಿಂದ ಶೇ. 80.30ಗೆ ಏರಿದೆ.
ವೃದ್ಧಾಪ್ಯ, ವಿಧವಾ ಇತ್ಯಾದಿ ಒಂದಿಲ್ಲೊಂದು ರೀತಿಯ ಪಿಂಚಣಿ ಪಡೆಯುತ್ತಿರುವ ಕುಟುಂಬದ ಸಂಖ್ಯೆ ಶೇ. 18.9ರಿಂದ ಶೇ. 23.5ಕ್ಕೆ ಹೆಚ್ಚಾಗಿದೆ.
ಉತ್ತಮ ಹಣಕಾಸು ಸಾಕ್ಷರತೆ ಹೊಂದಿರುವ ಗ್ರಾಮೀಣ ಕುಟುಂಬಗಳ ಸಂಖ್ಯೆ ಶೇ. 33.9ರಿಂದ ಶೇ. 51.3ಕ್ಕೆ ಏರಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow