ದಿವಂಗತ ನಟ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಚಾಲನೆ ಮಾಡುತ್ತಿದ್ದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಮಧ್ಯಾಹ್ನ ಹೆಣ್ಣೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಿಡ್ಲಘಟ್ಟ ಮೂಲದ ವೇಣುಗೋಪಾಲ್ ಎಂಬ ಯುವಕನು ತೀವ್ರವಾಗಿ ಗಾಯಗೊಂಡಿದ್ದು, ತನ್ನ ಸ್ನೇಹಿತೆ ಅನುಷಾ ನೀಡಿದ ದೂರಿನ ಮೇರೆಗೆ ಹೆಣ್ಣೂರು ಸಂಚಾರ ಠಾಣೆ ಪೊಲೀಸರು ನಟ ರಕ್ಷಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ತಾನಿಸಂದ್ರದಿಂದ ದಾಸರಹಳ್ಳಿಗೆ ತೆರಳುತ್ತಿದ್ದ ವೇಣುಗೋಪಾಲ್ ಮತ್ತು ಅನುಷಾ ಮಾನ್ಯತಾ ಟೆಕ್ ಪಾರ್ಕ್ ಮಾರ್ಗವಾಗಿ ಬೈಕ್‌ನಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಈ ವೇಳೆ ರಕ್ಷಕ್ ಕಾರು ಚಾಲನೆ ಮಾಡುತ್ತಿದ್ದವರಾಗಿದ್ದು,
ಅಪಘಾತದ ತೀವ್ರತೆಗೆ ವೇಣುಗೋಪಾಲ್ ಎಡಗಾಲಿನ ಮೂಳೆ ಮುರಿದಿದೆ. ಅಪಘಾತದ ನಂತರ ಗಾಯಾಳುವನ್ನು ತಕ್ಷಣವೇ ಟ್ಯಾಕ್ಸಿಯಲ್ಲಿ ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಹೆಚ್ಚಿನ ತನಿಖೆ ಮುಂದುವರಿದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.