Bomb Threat: ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ! ಹೈ ಅಲರ್ಟ್

ಬೆಂಗಳೂರು: ರಾಜ್ಯದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣಗಳು ಮರುಕಳಿಸುತ್ತಿರುವ ನಡುವೆ, ಇದೀಗ ಬೆಂಗಳೂರಿನ 40ಕ್ಕೂ ಹೆಚ್ಚು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿರುವುದು ಆತಂಕವನ್ನುಂಟುಮಾಡಿದೆ.
roadkill333@atomicmail.io
ಎಂಬ ಇ-ಮೇಲ್ ವಿಳಾಸದಿಂದ ಈ ಬೆದರಿಕೆ ಸಂದೇಶ ಬಂದಿದ್ದು, ತಕ್ಷಣವೇ ಶಾಲಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಇಲಾಖೆ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ, ಶಾಲೆ ಖಾಲಿ ಮಾಡಿಸಿ ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಬೆದರಿಕೆ ಇ-ಮೇಲ್ನಲ್ಲಿ, “ನಾನು ಶಾಲಾ ತರಗತಿಗಳಲ್ಲಿ ಹಲವು ಸ್ಫೋಟಕ ವಸ್ತುಗಳನ್ನು ಇಟ್ಟಿದ್ದೇನೆ. ಬ್ಲಾಕ್ ಪ್ಲಾಸ್ಟಿಕ್ ಚೀಲಗಳಲ್ಲಿ ಮುಚ್ಚಲಾಗಿದೆ. ನಿಮ್ಮೆಲ್ಲರನ್ನೂ ಈ ಲೋಕದಿಂದ ಅಳಿಸಿಹಾಕುತ್ತೇನೆ, ಯಾರೂ ಬದುಕುಳಿಯುವುದಿಲ್ಲ” ಎಂಬ ಉಲ್ಲೇಖಗಳೊಂದಿಗೆ, ಕಿಡಿಗೇಡಿ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾನೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಸೈಬರ್ ಕ್ರೈಂ ವಿಭಾಗದ ಸಹಾಯದಿಂದ ಇ-ಮೇಲ್ ಕಳುಹಿಸಿದ ವ್ಯಕ್ತಿಯ ಗುರುತು ಪತ್ತೆ ಹಚ್ಚುವ ತನಿಖೆ ಆರಂಭಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕೆಲವು ಶಾಲೆಗಳಿಗೆ ತಾತ್ಕಾಲಿಕ ರಜೆ ನೀಡಲಾಗಿದೆ. ಈ ಬೆದರಿಕೆಯಿಂದಾಗಿ ಪೋಷಕರಲ್ಲಿ ಆತಂಕ ಮನೆಮಾಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






