Cheteshwar Pujara: ಎಲ್ಲಾ ಮಾದರಿಯ ಕ್ರಿಕೆಟ್ʼಗೆ ನಿವೃತ್ತಿ ಘೋಷಿಸಿದ ಚೇತೇಶ್ವರ ಪೂಜಾರ
ಟೆಸ್ಟ್ ಪರಿಣತ ಬ್ಯಾಟರ್ ಚೇತೇಶ್ವರ ಪೂಜಾರ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವರ್ಷ ಟೆಸ್ಟ್ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಟೆಸ್ಟ್) ಮತ್ತು ಆಫ್ಸ್ಪಿನ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ (ಎಲ್ಲಾ ಮಾದರಿ) ನಿವೃತ್ತಿ ಘೋಷಿಸಿದ ನಂತರ, ಇದೀಗ ಪೂಜಾರ ಕೂಡಾ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವುಕ ಸಂದೇಶ ಹಂಚಿಕೊಂಡಿರುವ ಪೂಜಾರ, “ಟೀಂ ಇಂಡಿಯಾ ಜೆರ್ಸಿ ಧರಿಸಿ ರಾಷ್ಟ್ರಗೀತೆ ಹಾಡುವುದು, ಪ್ರತಿ ಬಾರಿ ಮೈದಾನಕ್ಕಿಳಿದಾಗ ಶ್ರೇಷ್ಠ ಪ್ರಯತ್ನ ಮಾಡುವುದು – ಇವು ಪದಗಳಲ್ಲಿ ಹೇಳಲಾಗದ ಅನುಭವ. ಆದರೆ ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆಯಿರುತ್ತದೆ. ಆದ್ದರಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ಎಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು” ಎಂದು ತಿಳಿಸಿದ್ದಾರೆ.
ರಾಜ್ಕೋಟಿನಲ್ಲಿ ಜನಿಸಿದ 37 ವರ್ಷದ ಪೂಜಾರ 2010ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಟೀಂ ಇಂಡಿಯಾದ ಪರ 103 ಟೆಸ್ಟ್ ಪಂದ್ಯಗಳನ್ನು ಆಡಿದ ಪೂಜಾರ, 43.60 ಸರಾಸರಿಯಲ್ಲಿ ಒಟ್ಟು 7,195 ರನ್ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ 19 ಶತಕಗಳು ಹಾಗೂ 35 ಅರ್ಧಶತಕಗಳು ಸೇರಿವೆ. ತವರಿನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅವರು 3,839 ರನ್ಗಳನ್ನು ಗಳಿಸಿದ್ದರು.
ಪೂಜಾರ ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ 8ನೇ ಅತಿ ಹೆಚ್ಚು ರನ್ಗಳಿಸಿದ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಭಾರತ ತಂಡದ ಅನೇಕ ಗೆಲುವುಗಳಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಫಾರ್ಮ್ ಕಳೆದುಕೊಂಡಿದ್ದರಿಂದ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?