Dharmasthala: ಪಂಜಾಬ್’ನಲ್ಲಿ ಧರ್ಮಸ್ಥಳ ಮೂಲದ ಏರೋಸ್ಪೇಸ್ ಉದ್ಯೋಗಿ ನಿಗೂಢ ಸಾವು..!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬಳಿಯ ಬೋಲಿಯಾರ್ ಗ್ರಾಮದ ಯುವ ಏರೋಸ್ಪೇಸ್ ಎಂಜಿನಿಯರ್ ಪಂಜಾಬ್‌ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆಕಾಂಕ್ಷ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಬೊಳಿಯೂರು ನಿವಾಸಿ.
ಬೊಳಿಯೂರು ನಿವಾಸಿ ಸುರೇಂದ್ರ ಹಾಗೂ ಸಿಂಧೂದೇವಿ ದಂಪತಿಗಳ ಪುತ್ರಿ 22 ವರ್ಷದ ಆಕಾಂಕ್ಷ ಎಸ್ ನಾಯರ್ ಪಂಜಾಬ್ನ ಎಲ್ಸಿಯು ಪಾಗ್ವಾಡ ಕಾಲೇಜಿನಲ್ಲಿ ಏರೋನಾಟಿಕ್ಸ್ ಎಂಜಿನಿಯರಿಂಗ್ ಮುಗಿಸಿ ಕಳೆದ ಆರು ತಿಂಗಳಿನಿಂದ ದೆಹಲಿಯಲ್ಲಿ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.
ಹೆಚ್ಚಿನ ತರಬೇತಿಗಾಗಿ ಜರ್ಮನಿಗೆ ತೆರಳಲು ತಯಾರಿ ನಡೆಸಿದ್ದ ಆಕಾಂಕ್ಷ ಕೆಲ ಶೈಕ್ಷಣಿಕ ದಾಖಲೆಗಳನ್ನು ಪಡೆಯಲು ಕಳೆದ ಶುಕ್ರವಾರ ಸಂಜೆ ದೆಹಲಿಯಿಂದ ಅಮೃತಸರಕ್ಕೆ ತೆರಳಿ ಅಲ್ಲಿ ಸ್ನೇಹಿತೆಯ ರೂಂನಲ್ಲಿದ್ದಳು.
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಸ್ನೇಹಿತ ಕೇರಳ ಮೂಲದ ಯುವಕನೊಂದಿಗೆ ಬೈಕ್ನಲ್ಲಿ ಪಾಗ್ವಾಡ್ ಕಾಲೇಜಿಗೆ ತೆರಳಿದ್ದಳು. ಸುಮಾರು 11 ಗಂಟೆಗೆ ಹೆತ್ತವರು ಆಕೆಗೆ ಕರೆ ಮಾಡಿದ್ದು, ಈ ವೇಳೆ ಕರೆ ಕಟ್ ಮಾಡಿದ್ದ ಆಕಾಂಕ್ಷ ತಾನು ಕಾಲೇಜಿನಲ್ಲಿರುವುದಾಗಿ ಮೆಸೇಜ್ ಮಾಡಿದ್ದಾಳೆ.
ಆ ಬಳಿಕ ಎರಡು ಗಂಟೆ ಸುಮಾರಿಗೆ ಕರೆ ಮಾಡಿದಾಗ ಆಕೆ ಕರೆ ಸ್ವೀಕರಿಸಿಲ್ಲ, ಮೆಸೇಜ್ ಕೂಡಾ ಮಾಡಿಲ್ಲ. ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪಂಜಾಬ್ನ ಜಲಂಧರ್ ಠಾಣಾ ಪೊಲೀಸರು ಆಕಾಂಕ್ಷಳ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಹೊರಟು ಬನ್ನಿ ಎಂದು ಹೇಳಿದ್ದಾರೆ.
ಜರ್ಮನಿಗೆ ಹೆಚ್ಚಿನ ಶಿಕ್ಷಣಕ್ಕಾಗಿ ತೆರಳಲು ಟ್ರೈ ಮಾಡುತ್ತಿದ್ದ ಆಕಾಂಕ್ಷಳಿಗೆ ಅಲ್ಲಿ ತರಬೇತಿಗೆ ಸೀಟ್ ಸಿಕ್ಕಿತ್ತು .ಹೀಗಾಗಿ ಎಲ್ಲಾ ದಾಖಲೆಗಳು ಬೇಕಿದ್ದ ಕಾರಣ ತಾನು ಕಲಿತ ಪಂಜಾಬ್ ನ ಪಾಗ್ವಾಡ್ ಎಲ್ಸಿಯು ಕಾಲೇಜಿಗೆ ಕರೆ ಮಾಡಿ ಸರ್ಟಿಫಿಕೇಟ್ ಕೇಳಿದ್ದಳು. ಆದರೆ ಸರ್ಟಿಫಿಕೇಟ್ ಕಳಿಸಿಕೊಡಲು ಆಗೋದಿಲ್ಲ, ನೀನೇ ಬಂದು ತೆಗೆದುಕೊಂಡು ಹೋಗು ಎಂದು ಕಾಲೇಜಿನವರು ಹೇಳಿದ್ದರು. ಹೀಗಾಗಿ ದೆಹಲಿಯಿಂದ ಪಂಜಾಬ್ನ ಕಾಲೇಜಿಗೆ ಆಕೆ ತೆರಳಿದ್ದಳು.
ಕಾಲೇಜಿಗೆ ಹೋಗುವವರೆಗೂ ಸಂಪರ್ಕದಲ್ಲಿದ್ದ ಆಕೆಗೆ ಬಳಿಕ ಏನಾಗಿದೆ ಎಂಬುದು ಕುಟುಂಬಸ್ಥರ ಅನುಮಾನ. ಕಾಲೇಜಿನವರೇ ಏನಾದರೂ ಮಾಡಿರುವ ಸಾಧ್ಯತೆ ಇದೆ ಎಂದು ಹೆತ್ತವರು ಆರೋಪಿಸಿದ್ದಾರೆ. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿ ಅಲ್ಲ. ಕಾಲೇಜಿನ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ಹೇಳಿರುವುದರಿಂದ ಕಾಲೇಜಿನವರೇ ಏನೋ ಮಾಡಿದ್ದಾರೆ ಎಂದು ಹೆತ್ತವರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






