IPL 2025: ಅಭಿಷೇಕ್ ಶರ್ಮಾ ಜೊತೆ ವಾಗ್ವಾದ: ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ!

ಮೇ 20, 2025 - 22:04
 0  19
IPL 2025: ಅಭಿಷೇಕ್ ಶರ್ಮಾ ಜೊತೆ ವಾಗ್ವಾದ: ಒಂದು ಪಂದ್ಯಕ್ಕೆ ದಿಗ್ವೇಶ್ ಅಮಾನತು, ಭಾರೀ ದಂಡ!

ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 61ನೇ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಥಿ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು.  ಇದೀಗ ಜಗಳಕ್ಕಿಳಿದಿದ್ದ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಲಾಗಿದೆ. ಈ ನಿಷೇಧದೊಂದಿಗೆ ದಿಗ್ವೇಶ್ ರಾಥಿಗೆ ಪಂದ್ಯ ಶುಲ್ಕದ ಶೇ 50 ರಷ್ಟು ದಂಡವನ್ನು ಸಹ ವಿಧಿಸಲಾಗಿದೆ.

ಸದ್ಯ ಅವರ ಡಿಮೆರಿಟ್ ಪಾಯಿಂಟ್ 5 ಕ್ಕೇರಿದ್ದು, ಹೀಗಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ದಿಗ್ವೇಶ್​ನನ್ನು ಹೊರಗಿಡುವಂತೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಚಿಸಲಾಗಿದೆ.  ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿದ ಬಳಿಕ ದಿಗ್ವೇಶ್ ರಾಥಿ ನೋಟ್​ಬುಕ್ ಸೆಲೆಬ್ರೇಷನ್​ನೊಂದಿಗೆ ಬ್ಯಾಟರ್​ನನ್ನು ಕೆಣಕಿದ್ದರು. ಈ ಅನುಚಿತ ವರ್ತನೆಗೆ ದಿಗ್ವೇಶ್​ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿತ್ತು.

ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.  ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಮನ್ ಧೀರ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬಳಿಕ ದಿಗ್ವೇಶ್ ನೋಟ್​ಬುಕ್ ಸೆಲೆಬ್ರೇಷನ್ ಮಾಡಿದ್ದರು. ಈ ಆಕ್ರೋಶಭರಿತ ಸಂಭ್ರಮಕ್ಕೆ ರಾಥಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.  ಇದೀಗ ಮೂರನೇ ಬಾರಿಗೆ ದಿಗ್ವೇಶ್ ರಾಥಿ ಐಪಿಎಲ್​ನ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ದಿಗ್ವೇಶ್ ರಾಥಿಗೆ ಒಂದು ಪಂದ್ಯದ ನಿಷೇಧ ಹೇರಿದ್ದಾರೆ. ಇದರ ಜೊತೆಗೆ ಪಂದ್ಯ ಶುಲ್ಕದ ಶೇ.50 ರಷ್ಟು ದಂಡ ವಿಧಿಸಿ, 2 ಡಿಮೆರಿಟ್ ಪಾಯಿಂಟ್ ನೀಡಿದ್ದಾರೆ.  ಇನ್ನು ದಿಗ್ವೇಶ್ ರಾಥಿ ಜೊತೆ ಮೈದಾನದಲ್ಲೇ ಜಗಳಕ್ಕಿಳಿದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಅತ್ತ ಒಂದು ಪಂದ್ಯದ ನಿಷೇಧಕ್ಕೆ ಒಳಗಾಗಿರುವ ದಿಗ್ವೇಶ್ ರಾಥಿ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow