IPL 2025: ಪ್ಲೇಆಫ್ ಸನಿಹದಲ್ಲಿರುವ RCBಗೆ ಬಿಗ್‌ ಶಾಕ್:‌ ಐಪಿಎಲ್‌ʼನಿಂದ ದೇವದತ್ತ್‌‌ ಪಡಿಕ್ಕಲ್‌ ರೂಲ್ಡ್‌ ಔಟ್‌

ಮೇ 8, 2025 - 10:50
 0  35
IPL 2025:  ಪ್ಲೇಆಫ್ ಸನಿಹದಲ್ಲಿರುವ RCBಗೆ ಬಿಗ್‌ ಶಾಕ್:‌ ಐಪಿಎಲ್‌ʼನಿಂದ ದೇವದತ್ತ್‌‌ ಪಡಿಕ್ಕಲ್‌ ರೂಲ್ಡ್‌ ಔಟ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಅವರನ್ನು ಐಪಿಎಲ್ 2025 ರಿಂದ ಹೊರಗಿಡಲಾಗಿದ್ದು, ತಂಡಕ್ಕೆ ಭಾರಿ ಹೊಡೆತ ಬಿದ್ದಿದೆ. ಗಮನಾರ್ಹವಾಗಿ, ಬಲ ಮಂಡಿರಜ್ಜು ಗಾಯದಿಂದಾಗಿ ಪಡಿಕ್ಕಲ್ ಋತುವಿನ ಉಳಿದ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ ಮತ್ತು ಅವರ ಬದಲಿಗೆ ಮಯಾಂಕ್ ಅಗರ್ವಾಲ್ ಅವರನ್ನು ಆಯ್ಕೆ ಮಾಡಲಾಗಿದೆ.

ಹೌದು ಪ್ಲೇ ಆಫ್ ಸನಿಹವಾಗುತ್ತಿರುವಾಗ ಆರ್​​ಸಿಬಿಗೆ ಆಟಗಾರರ ಇಂಜುರಿ ಸಮಸ್ಯೆ ಬೆಂಬಿಡದಂತೆ ಕಾಡುತ್ತಿದೆ. ಈ ಮೊದಲು ಆರಂಭಿಕ ಆಟಗಾರ ಫಿಲ್ ಸಾಲ್ಟ್ ಜ್ವರದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ. ಪ್ರಮುಖ ವೇಗಿ ಜೋಶ್ ಹೇಜಲ್​ವುಡ್ ಕೂಡ ಗಾಯಕ್ಕೆ ತುತ್ತಾಗಿದ್ದು, ಅವರು ಕೂಡ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ.

ಇದರ ಜೊತೆಗೆ ನಾಯಕ ರಜತ್ ಪಾಟಿದರ್ ಕೂಡ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಇದರ ಜೊತೆಗೆ ಇದೀಗ ತಂಡದ ಪ್ರಮುಖ ಬ್ಯಾಟರ್ ದೇವದತ್ ಪಡಿಕ್ಕಲ್ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದ ಹೊರಬಿದ್ದಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ವಾಸ್ತವವಾಗಿ ಈ ಸೀಸನ್​ನಲ್ಲಿ ಪಡಿಕ್ಕಲ್ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ಆಡಿರುವ 10 ಪಂದ್ಯಗಳಲ್ಲಿ ಪಡಿಕ್ಕಲ್ 247 ರನ್‌ಗಳನ್ನು ಗಳಿಸಿದ್ದರು.  ಇದರಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದ ಪಡಿಕ್ಕಲ್, ಐಪಿಎಲ್ 2025 ರಲ್ಲಿ ಮೂರನೇ ಸ್ಥಾನದಲ್ಲಿ ಆರ್‌ಸಿಬಿ ಪರ ಪ್ರಮುಖ ಪಾತ್ರ ವಹಿಸುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ಪಂದ್ಯಾವಳಿಯಿಂದ ಹೊರಗಿಡುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗುತ್ತಿದೆ. ಪಡಿಕ್ಕಲ್ ಮಂಡಿರಜ್ಜು ಗಾಯದಿಂದಾಗಿ ಬಳಲುತ್ತಿರುವ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ದೇವದತ್ ಪಡಿಕ್ಕಲ್ ಬದಲಿಗೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ ಆರ್​ಸಿಬಿ ಪಾಳಯವನ್ನು ಸೇರಿಕೊಂಡಿದ್ದಾರೆ. ಮಯಾಂಕ್ ಈ ಹಿಂದೆಯೂ ಆರ್‌ಸಿಬಿ ಪರ ಆಡಿದ್ದಾರೆ. ಮಯಾಂಕ್‌ಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಾಕಷ್ಟು ಆಡಿದ ಅನುಭವವಿದ್ದು, ಅವರು ಈ ಲೀಗ್‌ನಲ್ಲಿ ಇದುವರೆಗೆ 127 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 2661 ರನ್ ಗಳಿಸಿದ್ದು, ಇದರಲ್ಲಿ ಒಂದು ಶತಕ ಮತ್ತು 13 ಅರ್ಧಶತಕಗಳು ಸೇರಿವೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow