Online Crime: ನಟಿ ಶರಣ್ಯ ಶೆಟ್ಟಿ ಹೆಸರಲ್ಲಿ ನಕಲಿ ಖಾತೆ: ಹಣಕ್ಕೆ ಬೇಡಿಕೆಯಿಟ್ಟ ಸೈಬರ್ ಚೋರರು!

ಮಾರ್ಚ್ 20, 2025 - 12:01
 0  8
Online Crime: ನಟಿ ಶರಣ್ಯ ಶೆಟ್ಟಿ ಹೆಸರಲ್ಲಿ ನಕಲಿ ಖಾತೆ: ಹಣಕ್ಕೆ ಬೇಡಿಕೆಯಿಟ್ಟ ಸೈಬರ್ ಚೋರರು!

ಬೆಂಗಳೂರು: ರಾಜ್ಯದಲ್ಲಿ ಸೈಬರ್ ಅಕ್ರಮಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಸೈಬರ್ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಎಷ್ಟೇ ಪ್ರಯತ್ನ ನಡೆಸಿದರೂ ಅದು ಯಶಸ್ವಿ ಆಗುತ್ತಿಲ್ಲ. ವಿವಿಧ ಸ್ವರೂಪದಲ್ಲಿ ಜನರನ್ನು ಸೈಬರ್ ವಂಚಕರು ವಂಚನೆ ನಡೆಸುತ್ತಿದ್ದಾರೆ.

ಬ್ಯಾಂಕ್ ಹೆಸರಿನಲ್ಲಿ, ಟೂರಿಸಂ, ಆನ್ ಲೈನ್ ಗಿಫ್ಟ್ ಹೆಸರಿನಲ್ಲಿ ಅಮಾಯಕರನ್ನು ವಂಚನೆ ಮಾಡುತ್ತಿದ್ದಾರೆ. ಅಲ್ಲದೆ, ಪೊಲೀಸ್, ವಕೀಲ ಹಾಗೂ ಸರ್ಕಾರಿ ಅಧಿಕಾರಿ, ಹಾಗು ನಟ-ನಟಿಯರ ಹೆಸರಿನಲ್ಲೂ ಅಮಾಯಕ ಜನರನ್ನು ಸೈಬರ್ ವಂಚಕರು ವಂಚನೆ ಮಾಡುತ್ತಿದ್ದಾರೆ.

ಇದೀಗ ನಟಿ ಶರಣ್ಯ ಶೆಟ್ಟಿಯ ಹೆಸರು ಹಾಗೂ ಫೋಟೋವನ್ನು ವಂಚನೆಗೆ ಬಳಕೆ ಮಾಡಿ ವಂಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಕಲಿ ನಂಬರ್ ತೆಗೆದುಕೊಂಡಿರುವ ಚೋರರು, ಅದಕ್ಕೆ ನಟಿಯ ಫೋಟೋ ಅಂಟಿಸಿದ್ದಾರೆ. ಅಲ್ಲದೇ ಡಿಪಿಗೆ ಕೂಡ ಶರಣ್ಯ ಶೆಟ್ಟಿಯ ಫೋಟೋ ಅಪ್​ಲೋಡ್ ಮಾಡಿದ್ದು ಜನರಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ.

ಶರಣ್ಯ ಶೆಟ್ಟಿಯ ಫೋಟೋ ಡಿಪಿ ಹಾಕಿಕೊಂಡ ಖದೀಮರು, ಸ್ವಲ್ಪ ಹಣದ‌ ಅವಶ್ಯಕತೆ ಇತ್ತು. ಹೀಗಾಗಿ ಹಣ ಇದ್ದರೆ ಕಳಿಸಿ ಪ್ಲೀಜ್.. ಎಂದು ಫೇಕ್ ಮೆಸೇಜ್ ಮಾಡಿದ್ದಾರೆ. ಬೇರೆ ನಕಲಿ‌ ನಂಬರ್ ಪಡೆದು ಅದಕ್ಕೆ ನಟಿಯ ಹೆಸರು ಬರುವಂತೆ ವಂಚಕರು ಮಾಡಿದ್ದಾರೆ. ಹೀಗಾಗಿ ಇದನ್ನೂ ನೋಡಿದವರಿಗೆ ಅದು ಶರಣ್ಯ ಅವರದ್ದೇ ನಂಬರ್ ಎನ್ನುವಂತೆ ಮಾಡಿದ್ದಾರೆ.

ಮೆಸೇಜ್ ಮಾಡಿರುವ ವಂಚಕರು ನನಗೆ ಇಂತಿಷ್ಟು ಹಣ ಬೇಕು ಎಂದು ಕೇಳಿದ್ದಾರೆ. ಈ ಕುರಿತು ಶರಣ್ಯ ಶೆಟ್ಟಿಯವರು ತಮ್ಮ ಅಧಿಕೃತ ಇನ್​ಸ್ಟಾದ ಸ್ಟೇಟಸ್​ನಲ್ಲಿ ಬರೆದುಕೊಂಡಿದ್ದಾರೆ. ನನ್ನ ಹೆಸರಲ್ಲಿ ಅಪರಿಚಿತರು ವಂಚನೆಗೆ ಇಳಿದಿದ್ದಾರೆ. ಯಾರೂ ಕೂಡ ಇದನ್ನು ನಂಬಿ ಹಣ ಕಳಿಸಬೇಡಿ. ವಂಚನೆಗೆ ಮುಂದಾಗಿರುವ ಖದೀಮರ ವಿರುದ್ಧ ಸೈಬರ್ ಕ್ರೈಂ ಇಲಾಖೆಗೆ ದೂರು‌ ನೀಡುತ್ತೇನೆ ಎಂದು ಶರಣ್ಯ ಶೆಟ್ಟಿ ಅವರು ಹೇಳಿದ್ದಾರೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow