Pomegranate: ಪ್ರತಿ ದಿನ ದಾಳಿಂಬೆ ಹಣ್ಣು ಸೇವಿಸಿ, ಅನೇಕ ಕಾಯಿಲೆಗಳ ಚಿಕಿತ್ಸೆಗೆ ಇದು ಬೆಸ್ಟ್!
ಬೆಲೆಯಲ್ಲಿ ದುಬಾರಿ ಎನ್ನುವ ಒಂದೇ ಕಾರಣ ಬಿಟ್ಟರೆ, ದಾಳಿಂಬೆ ಹಣ್ಣು ಪೋಷಕಾಂಶಗಳಿಂದ ತುಂಬಿ ಆರೋಗ್ಯಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿ. ಸಾಮಾನ್ಯ ದೇಹದ ಇಮ್ಯೂನಿಟಿಯನ್ನು ಹೆಚ್ಚಿಸುವುದರಿಂದ ಹಿಡಿದು, ಜೀರ್ಣಕ್ರಿಯೆ ಸುಧಾರಿಸುವುದು, ರಕ್ತದ ಒತ್ತಡವನ್ನು ನಿಯಂತ್ರಿಸುವುದು, ಮೆದುಳಿನ ಆರೋಗ್ಯ ಕಾಪಾಡುವುದು ಹಾಗೂ ಲೈಂಗಿಕ ಸಮಸ್ಯೆ ನಿವಾರಣೆಯವರೆಗೆ ದಾಳಿಂಬೆ ಹಣ್ಣಿನ ಪಾತ್ರವನ್ನು ನಿರ್ಲಕ್ಷ್ಯ ಮಾಡಲಾಗದು.
ಇಂದಿನ ಬ್ಯುಸಿ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನಶೈಲಿಯ ಪರಿಣಾಮವಾಗಿ ಬೊಜ್ಜುತನ, ಮಧುಮೇಹ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗಿದೆ. ವೈದ್ಯಕೀಯ ತಜ್ಞರ ಪ್ರಕಾರ, ಹಸಿರು ತರಕಾರಿಗಳು ಹಾಗೂ ಹಣ್ಣುಗಳನ್ನು ಆಹಾರದಲ್ಲಿ ಸೇರಿಸುವುದು ಆರೋಗ್ಯ ಕಾಪಾಡುವ ಉತ್ತಮ ಮಾರ್ಗವಾಗಿದೆ. ಹಣ್ಣುಗಳಲ್ಲಿ ವಿಶೇಷವಾಗಿ ದಾಳಿಂಬೆ ಹೃದಯದ ಆರೋಗ್ಯಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ.
ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ಉರಿಯೂತ ನಿರೋಧಕ ಗುಣಗಳು (Anti-inflammatory properties) ದೇಹವನ್ನು ಒಳಗಿನಿಂದ ರಕ್ಷಿಸುತ್ತವೆ. ಇದು ಹೃದಯ ಮತ್ತು ಅಪಧಮನಿಗಳನ್ನು (Arteries) ಶುದ್ಧವಾಗಿಡಲು ಸಹಾಯ ಮಾಡುತ್ತದೆ. ದಾಳಿಂಬೆ ತಿನ್ನುವುದು ಅಥವಾ ಅದರ ರಸ ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ ಹಾಗೂ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಕಡಿಮೆಯಾಗುತ್ತದೆ ಎಂಬುದು ಅನೇಕ ಅಧ್ಯಯನಗಳಲ್ಲಿ ದೃಢಪಟ್ಟಿದೆ.
ದಾಳಿಂಬೆಯಲ್ಲಿ ಇರುವ ಪ್ಯುನಿಕಲಾಜಿನ್, ಟ್ಯಾನಿನ್‌ಗಳು ಮತ್ತು ಆಂಥೋಸಯಾನಿನ್‌ಗಳು ಎಂಬ ಉತ್ಕರ್ಷಣ ನಿರೋಧಕಗಳು ದೇಹದೊಳಗಿನ ಹಾನಿಕಾರಕ ಫ್ರೀ ರಾಡಿಕಲ್‌ಗಳನ್ನು ತಟಸ್ಥಗೊಳಿಸುತ್ತವೆ. ಇದರ ಮೂಲಕ ಆಕ್ಸಿಡೇಟಿವ್ ಒತ್ತಡ ಕಡಿಮೆಯಾಗುತ್ತದೆ ಹಾಗೂ ರಕ್ತನಾಳಗಳ ಗೋಡೆಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.
ಇದಲ್ಲದೆ, ದಾಳಿಂಬೆಯಲ್ಲಿರುವ ಸಕ್ರಿಯ ಸಂಯುಕ್ತಗಳು ರಕ್ತದೊತ್ತಡ ನಿಯಂತ್ರಣಕ್ಕೆ ಸಹಾಯಕವಾಗಿದ್ದು, ಪ್ರತಿದಿನ ದಾಳಿಂಬೆ ರಸವನ್ನು ಕುಡಿಯುವುದರಿಂದ ಸಿಸ್ಟೊಲಿಕ್ ರಕ್ತದೊತ್ತಡ (Systolic BP) ಕಡಿಮೆಯಾಗುವ ಸಾಧ್ಯತೆ ಇದೆ. ಇದು ಹೃದಯದ ಮೇಲಿನ ಒತ್ತಡವನ್ನು ತಗ್ಗಿಸಿ ದೇಹದ ವಿವಿಧ ಅಂಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳ ಸರಿಯಾದ ಪೂರೈಕೆ ಮಾಡಲು ಸಹಾಯ ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ (LDL) ಆಕ್ಸಿಡೀಕರಣಗೊಂಡಾಗ ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ದಾಳಿಂಬೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಈ ಪ್ರಕ್ರಿಯೆಯನ್ನು ತಡೆಯುತ್ತವೆ. ಪ್ರತಿದಿನ ದಾಳಿಂಬೆ ತಿನ್ನುವುದರಿಂದ ರಕ್ತನಾಳಗಳು ಶುದ್ಧವಾಗಿ, ರಕ್ತ ಪರಿಚಲನೆ ಸುಗಮವಾಗಿ, ಹೃದಯ ಆರೋಗ್ಯ ದೃಢವಾಗಿ ಉಳಿಯುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?