Prabhas, Anushka Shetty: ಬರೋಬ್ಬರಿ 8 ವರ್ಷಗಳ ನಂತರ ಕಾಣಿಸಿಕೊಳ್ಳಲಿರುವ ಬಾಹುಬಲಿ ಜೋಡಿ!
ತೆಲುಗು ಚಿತ್ರರಂಗದ ಮೆಚ್ಚಿನ ಜೋಡಿಯಾದ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಬಾರಿ ದೊಡ್ಡ ಪರದೆಯ ಮೇಲೆ ಅಲ್ಲದೆ, ವಿಶೇಷ ಸಂದರ್ಶನದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ.
‘ಬಿಲ್ಲ’, ‘ಮಿರ್ಚಿ’, ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿ ಬ್ಲಾಕ್‌ಬಸ್ಟರ್ ಯಶಸ್ಸು ಕಂಡಿದ್ದ ಈ ಜೋಡಿ, ‘ಬಾಹುಬಲಿ 2’ ನಂತರ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ನಡುವೆಯೇ ಇವರಿಬ್ಬರ ಬಗ್ಗೆ ಪ್ರೇಮ ಹಾಗೂ ಮದುವೆ ಕುರಿತ ಅನೇಕ ವದಂತಿಗಳು ಹರಿದಾಡಿದ್ದರೂ, ಇಬ್ಬರೂ ನಿರಾಕರಿಸಿದ್ದರು.
ಇದೀಗ ‘ಬಾಹುಬಲಿ’ ಸಿನಿಮಾ ಎಂಟು ವರ್ಷಗಳ ಬಳಿಕ ಮರುಬಿಡುಗಡೆ ಆಗುತ್ತಿದ್ದು, ಅದರ ಪ್ರಚಾರಕ್ಕಾಗಿ ವಿಶೇಷ ಫನ್ನಿ ಪಾಡ್‌ಕಾಸ್ಟ್ ಶೈಲಿಯ ಸಂದರ್ಶನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ ಮಾತ್ರವಲ್ಲದೆ ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ನಿರ್ದೇಶಕ ಎಸ್.ಎಸ್. ರಾಜಮೌಳಿ ಹಾಗೂ ಇತರ ಕಲಾವಿದರು, ತಂತ್ರಜ್ಞರೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಕಾರ್ಯಕ್ರಮದ ಚಿತ್ರೀಕರಣ ಕೆಲವೇ ದಿನಗಳಲ್ಲಿ ನಡೆಯಲಿದ್ದು, ಅಕ್ಟೋಬರ್‌ನಲ್ಲಿ ಯೂಟ್ಯೂಬ್ ಹಾಗೂ ಟಿವಿ ಚಾನೆಲ್‌ಗಳಲ್ಲಿ ಪ್ರಸಾರಗೊಳ್ಳಲಿದೆ.
ಇದಕ್ಕೂ ಮೊದಲು ‘ಬಾಹುಬಲಿ’ ಬಿಡುಗಡೆ ವಾರ್ಷಿಕೋತ್ಸವದ ವೇಳೆ ಚಿತ್ರತಂಡ ಪಾರ್ಟಿ ನಡೆಸಿದ್ದರೂ, ಅನುಷ್ಕಾ ಶೆಟ್ಟಿ ಹಾಗೂ ತಮನ್ನಾ ಭಾಗವಹಿಸಿರಲಿಲ್ಲ. ಆದರೆ ಈ ವಿಶೇಷ ಕಾರ್ಯಕ್ರಮದಲ್ಲಿ ಇಬ್ಬರೂ ಹಾಜರಾಗಲಿದ್ದಾರೆ ಎಂಬ ನಿರೀಕ್ಷೆಯಿದೆ. ‘ಬಾಹುಬಲಿ’ ತಂಡವು ಶೂಟಿಂಗ್ ಸಮಯದಲ್ಲಿಯೂ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಫನ್ನಿ ಸ್ಕಿಟ್ ಮಾಡಿದ್ದ ಅನುಭವವನ್ನು ಹೊಂದಿದ್ದು, ಇದೀಗ ಮತ್ತೊಮ್ಮೆ ಅದೇ ರೀತಿಯ ಮನರಂಜನಾತ್ಮಕ ಕಾರ್ಯಕ್ರಮವನ್ನು ಅಭಿಮಾನಿಗಳಿಗೆ ನೀಡುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?