RCB Victory Parade: ಸಂಭ್ರಮಕ್ಕೆ ಬೆಂಗಳೂರು ಸಜ್ಜು: RCB ವಿಕ್ಟರಿ ಪರೇಡ್ ಎಲ್ಲಿಂದ, ಯಾವಾಗ ಶುರು ಗೊತ್ತಾ..?

ಬೆಂಗಳೂರು: ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಫೈನಲ್ನಲ್ಲಿ ಗೆಲ್ಲುವ ಮೂಲಕ ಐಪಿಎಲ್ನ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಿದೆ. ಲಕ್ಷಾಂತರ ಅಭಿಮಾನಿಗಳ ನಡುವೆ ಕಪ್ ಗೆದ್ದ ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ಮುಳುಗಿದೆ. ಇನ್ನೂ RCB ತಂಡ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸುವ ಸಲುವಾಗಿ ತವರೂರು ಬೆಂಗಳೂರಿಗೆ ಆಗಮಿಸಲಿದೆ. ಅಹಮದಾಬಾದ್ನಿಂದ ವಿಶೇಷ ವಿಮಾನದಲ್ಲಿ ಆರ್ಸಿಬಿ ಆಟಗಾರರು ಹೊರಟು ಮಧ್ಯಾಹ್ನ 1:30ರ ವೇಳೆಗೆ ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಆರ್ಸಿಬಿ ತಂಡ ತಾಜ್ ವೆಸ್ಟೆಂಡ್ ಹೋಟೆಲ್ಗೆ ತೆರಳಲಿದೆ. ಇಲ್ಲಿ ವಿಶ್ರಾಂತಿ ಪಡೆದ ಬಳಿಕ ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಟ್ರೋಫಿ ನೀಡಲಿದೆ. ಸಿಎಂ ಭೇಟಿ ಬಳಿಕ 5 ಗಂಟೆಗೆ ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಓಪನ್-ಟಾಪ್ ಬಸ್ ಮೂಲಕ ಆರ್ಸಿಬಿ ತಂಡದ ಪರೇಡ್ ನಡೆಯಲಿದೆ. ಸುಮಾರು 1 ಕಿ.ಮೀ ವಿಜಯಯಾತ್ರೆ ನಡೆಸಲು ಸಿದ್ಧತೆ ನಡೆದಿದೆ.
ಸಾರ್ವಜನಿಕ ಮೆರವಣಿಗೆ ಬಳಿಕ 6 ಗಂಟೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






