RCB vs PBKS ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಯಾವ ತಂಡ ಚಾಂಪಿಯನ್ ಆಗುತ್ತೆ?

ಇಡೀ ದೇಶ ಕಾತರದಿಂದ ಕಾಯುತ್ತಿರುವ ಐಪಿಎಲ್ 2025 ರ ಫೈನಲ್ ಪಂದ್ಯ ಇಂದು ಅಹಮದಾಬಾದ್ನ ಭವ್ಯ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್ಗೆ ಲಗ್ಗೆ ಇಟ್ಟಿರುವ ರಜತ್ ಪಟಿದಾರ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಭರ್ಜರಿ ಕಾದಾಟ ನಡೆಸಲಿವೆ.
ಪಂಜಾಬ್-ಮುಂಬೈ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಕೊನೆಗೂ ಮಳೆ ನಿಂತ ಮೇಲೆ ಸುಮಾರು 2:30 ಗಂಟೆಯ ನಂತರ ಪಂದ್ಯ ಆಡಿಸಲಾಗಿತ್ತು. ಮಳೆ ನಿಂತ ಬಳಿಕ ಪೂರ್ಣ 20 ಓವರ್ಗಳನ್ನು ಆಡಿಸಲಾಗಿತ್ತು. ಹವಾಮಾನ ವರದಿ ಪ್ರಕಾರ ಅಹಮದಾಬಾದ್ನಲ್ಲಿ ಇಂದು ಮೋಡ ಕವಿದ ವಾತಾವರಣ ಇರಲಿದೆ. ಮಳೆ ಬಂದರೂ ದೊಡ್ಡ ಮಟ್ಟದ ಸಮಸ್ಯೆ ಎದುರಾಗುವುದಿಲ್ಲ. ಯಾಕೆಂದರೆ ಪ್ರತಿ ದೊಡ್ಡ ಕ್ರಿಕೆಟ್ ಟೂರ್ನಿಗೆ ಇರುವಂತೆ ಫೈನಲ್ ಪಂದ್ಯಕ್ಕೆ ಮೀಸಲು ದಿನ ಇರಿಸಲಾಗಿದೆ.
ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್ಗಳ ಕಡಿತ ಮಾಡಲಾಗುತ್ತದೆ. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ನಿರ್ಧರಿಸಬೇಕಿದ್ದರೆ ಉಭಯ ತಂಡಗಳು ಕನಿಷ್ಠ 5 ಓವರ್ಗಳನ್ನು ಆಡಿರಬೇಕು.
ಇನ್ನು ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್ಗಳ ಪಂದ್ಯವನ್ನು ಆಯೋಜಿಸಲಿದೆ. ಅದರಂತೆ ಮಧ್ಯರಾತ್ರಿ 1.30 ರೊಳಗೆ 5 ಓವರ್ಗಳ ಪಂದ್ಯವನ್ನು ಆಯೋಜಿಸಲು ಮುಂದಾಗಲಿದ್ದಾರೆ.
ಒಂದು ವೇಳೆ ಮಧ್ಯರಾತ್ರಿ 1.30 ರೊಳಗೆ 5 ಓವರ್ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಪಂದ್ಯವನ್ನು ಮೀಸಲು ದಿನದಾಟಕ್ಕೆ ಮುಂದೂಡಲಾಗುತ್ತದೆ. ಅದರಂತೆ ಬುಧವಾರ ಫೈನಲ್ ಪಂದ್ಯವನ್ನು ಮರು ಆಯೋಜಿಸಲಿದ್ದಾರೆ.
ಒಂದು ವೇಳೆ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಕನಿಷ್ಠ 5 ಓವರ್ಗಳ ಪಂದ್ಯ ನಡೆಸಲು ಸಾಧ್ಯವಾಗದೇ ಇದ್ದರೆ ಮಾತ್ರ ಫೈನಲ್ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ.
ಅಂದರೆ ಮೀಸಲು ದಿನದಾಟದಲ್ಲೂ ಪಂದ್ಯ ನಡೆಯದಿದ್ದರೆ ಪಂಜಾಬ್ ಕಿಂಗ್ಸ್ ತಂಡ ಚಾಂಪಿಯನ್ ಆಗಲಿದೆ. ಏಕೆಂದರೆ ಈ ಬಾರಿಯ ಐಪಿಎಲ್ನ ಅಂಕ ಪಟ್ಟಿಯಲ್ಲಿ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದರೆ, ಆರ್ಸಿಬಿ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಮಳೆಯಿಂದಾಗಿ ಮೀಸಲು ದಿನದಾಟದಲ್ಲೂ ಪಂದ್ಯ ರದ್ದಾದರೆ ಪಂಜಾಬ್ ಕಿಂಗ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






