ಅಮಿತಾಬಚ್ಚನ್, ಅಮೀರ್ ಖಾನ್ ರಿಂದ ಕಾರು ಖರೀದಿ: ಕೆಜಿಎಫ್ ಬಾಬುಗೆ RTO ಶಾಕ್!

ಬೆಂಗಳೂರು: ಐಷಾರಾಮಿ ಜೀವನಶೈಲಿಯಿಂದ ಗುರುತಿಸಿಕೊಂಡಿರುವ ‘ಕೆಜಿಎಫ್ ಬಾಬು’ ಈಗ ತೆರಿಗೆ ವಿವಾದದಲ್ಲಿ ಸಿಲುಕಿದ್ದಾರೆ. ವಸಂತನಗರದಲ್ಲಿರುವ ಅವರ ನಿವಾಸ ‘ರುಕ್ಸಾನಾ ಪ್ಯಾಲೇಸ್’ ಮೇಲೆ ಬೆಂಗಳೂರು RTO ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಷಾರಾಮಿ ಕಾರುಗಳಿಗೆ ರಾಜ್ಯ ತೆರಿಗೆ ಕಟ್ಟದೇ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.
ಕೆಜಿಎಫ್ ಬಾಬುಗೆ ಬಾಲಿವುಡ್ ಸೆಲೆಬ್ರಿಟಿಗಳು ಬಳಸಿದ ಕಾರುಗಳನ್ನು ಖರೀದಿ ಮಾಡುವ ಕ್ರೇಜ್ ಇದ್ದು, ಅವರ ಬಳಿ ಎರಡು ರೋಲ್ಸ್ ರಾಯ್ಸ್ ಕಾರುಗಳಿವೆ. ಈ ಕಾರುಗಳಲ್ಲಿ ಒಂದನ್ನು ಅಮಿತಾಭ್ ಬಚ್ಚನ್ ಬಳಸಿದ MH 11 AX 1 ಹಾಗೂ ಮತ್ತೊಂದು ಆಮಿರ್ ಖಾನ್ ಒಂದು ವರ್ಷ ಬಳಸಿದ್ದ MH 02 BB 2 ಎನ್ನಲಾಗಿದೆ.
ಆರ್ಟಿಒ ಜಂಟಿ ಆಯುಕ್ತೆ ಶೋಭಾ ನೇತೃತ್ವದ ತಂಡ ಬಾಬು ಮನೆಗೆ ಭೇಟಿ ನೀಡಿದಾಗ, ಕೆಲಕಾಲ ಗೇಟ್ ತೆರೆಯದೆ ಬಾಬು ಪ್ರತಿಕ್ರಿಯಿಸುತ್ತಿದ್ದರು. ಈ ಕಾರಣದಿಂದ ಅಧಿಕಾರಿಗಳು ಮನೆಯ ಹೊರಗಡೆ ಕಾಯುವ ಸ್ಥಿತಿಗೆ ತಲುಪಿದರು.
ಘಟನೆಯ ಕುರಿತು ಕೆಜಿಎಫ್ ಬಾಬು ಸ್ಪಷ್ಟನೆ ನೀಡಿದ್ದು, “ನಾನು ಮಹಾರಾಷ್ಟ್ರದಲ್ಲಿ ಲೈಫ್ಟೈಮ್ ಟ್ಯಾಕ್ಸ್ ಕಟ್ಟಿದ್ದೇನೆ. ಇದೀಗ ಕರ್ನಾಟಕದಲ್ಲೂ ತೆರಿಗೆ ಕಟ್ಟಬೇಕೆಂದು ಹೇಳಲಾಗುತ್ತಿದೆ. ನಾನು ಜವಾಬ್ದಾರಿಯುತ ವ್ಯಕ್ತಿ, ತೆರಿಗೆ ಕಟ್ಟದೇ ಇರಲ್ಲ. ಅಧಿಕಾರಿಗಳು ಅವಕಾಶ ಕೊಟ್ಟರೆ ಈಗಲೇ ತೆರಿಗೆ ಕಟ್ಟಲು ಸಿದ್ಧನಿದ್ದೇನೆ,” ಎಂದು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






