ತಲಾ ಆದಾಯದಲ್ಲಿ ಕರ್ನಾಟಕ ನಂಬರ್ 1: ಇದಕ್ಕೆ ಗ್ಯಾರಂಟಿ ರೀಸನ್ ಎಂದ ಸುರ್ಜೇವಾಲಾ!

ಬೆಂಗಳೂರು:- ತಲಾ ಆದಾಯದಲ್ಲಿ ಕರ್ನಾಟಕವೇ ನಂಬರ್ 1 ಆಗಿದ್ದು, ಇದಕ್ಕೆ ಗ್ಯಾರಂಟಿ ಕಾರಣ ಎಂದು ರಣದೀಪ್ ಸುರ್ಜೇವಾಲಾ ಹೇಳಿಕೆ ಕೊಟ್ಟಿದ್ದಾರೆ.
ಪತ್ರಿಕಾ ವರದಿಯನ್ನು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಅವರು, ಈ ಗಮನಾರ್ಹ ಸಾಧನೆಗೆ ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಕಾರಣ. ಜತೆಗೆ ಸಾಮಾನ್ಯ ನಾಗರಿಕರ ಸಬಲೀಕರಣದ ಗುರಿಯನ್ನು ಹೊಂದಿರುವ ‘ಗ್ಯಾರಂಟಿ ಯೋಜನೆಗಳು’ ನೇರ ಪರಿಣಾಮ ಬೀರಿವೆ ಎಂದಿದ್ದಾರೆ.
ಗ್ಯಾರಂಟಿ ಯೋಜನೆಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದರು. ಆದರೆ, ಕೇಂದ್ರ ಹಣಕಾಸು ಸಚಿವಾಲಯದ ದತ್ತಾಂಶವೇ ಈಗ ಅವರ ಪ್ರತಿಪಾದನೆಯ ಪೊಳ್ಳುತನವನ್ನು ಬಹಿರಂಗಪಡಿಸಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಕಾಂಗ್ರೆಸ್ ನಾಯಕತ್ವದಲ್ಲಿ ಕರ್ನಾಟಕವು ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಸ್ಥಿರವಾಗಿ ಮುಂದುವರಿಯುತ್ತಿದೆ. ಇಂದು, ರಾಜ್ಯದ ಗ್ಯಾರಂಟಿ ಯೋಜನೆಗಳ ಆಧಾರಿತ ಆಡಳಿತ ಮಾದರಿಯು ಕೋಟ್ಯಂತರ ಕನ್ನಡಿಗರಿಗೆ ನೆರವಾಗಿದ. ಗ್ಯಾರಂಟಿಗಳ ಮೂಲಕ ವಾರ್ಷಿಕವಾಗಿ 53,000 ಕೋಟಿ ರೂ. ಮೊತ್ತದ ಸೌಲಭ್ಯವನ್ನು ನಾಗರಿಕರಿಗೆ ನೀಡಲಾಗುತ್ತಿದ್ದು, ರಾಷ್ಟ್ರೀಯ ಮಾನದಂಡವಾಗಿ ಹೊರಹೊಮ್ಮಿದೆ ಎಂದು ಸುರ್ಜೇವಾಲ ಹೇಳಿದ್ದಾರೆ.
ಕಲ್ಯಾಣದಿಂದ ಬೆಳವಣಿಗೆಯವರೆಗೆ, ಕರ್ನಾಟಕವು ಹೊಸ ಎತ್ತರವನ್ನು ಏರುತ್ತಿದೆ. ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಪ್ರಗತಿಯನ್ನು ಜತೆಯಾಗಿ ಕೊಂಡೊಯ್ಯಬಹುದು ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






