ಜಾತಿ ಗಣತಿಗೆ ಮುಹೂರ್ತ ಫಿಕ್ಸ್: ಸೆಪ್ಟೆಂಬರ್ 22 ರಿಂದ ಮನೆ ಮನೆಗೆ ಬಂದು ಅಂಕಿ-ಅಂಶ ಸಂಗ್ರಹ

ಬೆಂಗಳೂರು: ರಾಜ್ಯದಲ್ಲಿ ಬಹು ನಿರೀಕ್ಷಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ)ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ಈ ಸಮೀಕ್ಷೆ ನಡೆಸಲಾಗುವುದು. ಅಕ್ಟೋಬರ್ ಕೊನೆಯ ಒಳಗಾಗಿ ಸಮೀಕ್ಷೆಯ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಗುರಿ ನಿಗದಿಯಾಗಿದೆ.
ಈ ಕುರಿತು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಮಹತ್ವದ ಸೂಚನೆಗಳನ್ನು ನೀಡಿದರು. ತರಬೇತಿ ಸೇರಿದಂತೆ ಸಮೀಕ್ಷೆಯ ಪೂರ್ವ ಸಿದ್ಧತೆಗಳನ್ನು ತಕ್ಷಣವೇ ಆರಂಭಿಸಲು ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ, ಜಾತಿ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದರಂತೆ ರಾಜ್ಯದ ಸುಮಾರು 7 ಕೋಟಿ ಜನರ ಸಮಗ್ರ ಮಾಹಿತಿ ಸಂಗ್ರಹಿಸಲಾಗುವುದು. “ಈ ಸಮೀಕ್ಷೆಯ ಉದ್ದೇಶ ಜಾತಿ ತಾರತಮ್ಯ ನಿವಾರಣೆಯಲ್ಲದೆ, ಸಾಂವಿಧಾನಿಕ ನ್ಯಾಯಕ್ಕೆ ಅನುವು ಕಲ್ಪಿಸುವುದಾಗಿದೆ” ಎಂದು ಸಿಎಂ ತಿಳಿಸಿದ್ದಾರೆ.
ಸಮೀಕ್ಷೆಯಲ್ಲಿ ಪ್ರತಿಯೊಬ್ಬ ನಾಗರಿಕರ ಆರ್ಥಿಕ ಸ್ಥಿತಿ, ಆಸ್ತಿ ಮಾಲಿಕತ್ವ, ಜಮೀನು ಹೊಂದಾಣಿಕೆ ಮುಂತಾದ ಮಾಹಿತಿ ದಾಖಲೆಯಾಗಬೇಕು. ಈ ವರದಿ ಮುಂದಿನ ಬಜೆಟ್ ರೂಪಿಸುವ ವೇಳೆ ಆಧಾರವಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿಎಂ ಅಭಿಪ್ರಾಯದಂತೆ, ಈ ಬಾರಿಯ ಸಮೀಕ್ಷೆ ದೇಶಕ್ಕೆ ಮಾದರಿಯಾಗುವಂತೆ ಅತ್ಯಂತ ಪ್ರಾಮಾಣಿಕ ಹಾಗೂ ವಿಜ್ಞಾನಬದ್ಧ ರೀತಿಯಲ್ಲಿ ನಡೆಯಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






