ಐಪಿಎಲ್ ಪುನರಾರಂಭಕ್ಕೆ ಡೇಟ್ ಫಿಕ್ಸ್: ಈ 3 ನಗರಗಳಲ್ಲಿ ಮ್ಯಾಚ್ ನಡೆಸಲು BCCI ಪ್ಲಾನ್.!?

ಮೇ 11, 2025 - 21:31
 0  22
ಐಪಿಎಲ್ ಪುನರಾರಂಭಕ್ಕೆ ಡೇಟ್ ಫಿಕ್ಸ್: ಈ 3 ನಗರಗಳಲ್ಲಿ ಮ್ಯಾಚ್ ನಡೆಸಲು BCCI ಪ್ಲಾನ್.!?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ನಿಗದಿ ಮಾಡಲಾಗಿದೆ. ಅದರಂತೆ ಮೇ 15 ಅಥವಾ 16 ರಂದು ಟೂರ್ನಿಯನ್ನು ಮತ್ತೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ. ಶನಿವಾರ ಸಂಜೆ ಭಾರತ ಮತ್ತು ಪಾಕಿಸ್ತಾನ್ ಕದನ ವಿರಾಮಕ್ಕೆ ಒಪ್ಪಿಕೊಂಡ ನಂತರ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಈ ವಾರದಲ್ಲೇ ಟೂರ್ನಿ ಮತ್ತೆ ನಡೆಯುವುದು ಬಹುತೇಕ ಖಚಿತವಾಗಿದೆ.

ಇದೀಗ ಐಪಿಎಲ್ 2025 ರಲ್ಲಿ ಇಲ್ಲಿಯವರೆಗೆ 57 ಪಂದ್ಯಗಳು ನಡೆದಿವೆ. 58 ನೇ ಪಂದ್ಯವು ಮೇ 8 ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯುತ್ತಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಶಸ್ತ್ರಾಸ್ತ್ರ ದಾಳಿ ಆರಂಭವಾದ ಕಾರಣ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಆ ಬಳಿಕ ಸಭೆ ನಡೆಸಿದ್ದ ಬಿಸಿಸಿಐ ಪಂದ್ಯಾವಳಿಯನ್ನು ಒಂದು ವಾರ ಮುಂದೂಡಲು ನಿರ್ಧರಿಸಿತ್ತು.

ಟೂರ್ನಿಯಲ್ಲಿ ಇನ್ನೂ 12 ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ನಂತರ ನಾಲ್ಕು ಪ್ಲೇಆಫ್ ಪಂದ್ಯಗಳು ನಡೆಯಲಿವೆ. ಆರಂಭದಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಹೈದರಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಹಾಗೆಯೇ ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯವನ್ನು ಕೋಲ್ಕತ್ತಾದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಐಪಿಎಲ್ ಅರ್ಧಕ್ಕೆ ನಿಂತ ಕಾರಣ ಬಿಸಿಸಿಐ, ಇದೀಗ ನೂತನ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕಾಗಿದೆ.

ಇದೀಗ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡಿರುವ ಬಿಸಿಸಿಐ ಉಳಿದ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಭಾರತದ 3 ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್​ನಲ್ಲಿ ನಡೆಸಲು ತೀರ್ಮಾನಿಸಿದೆ ಎಂದು ಇಎಸ್‌ಪಿಎನ್ ವರದಿ ಮಾಡಿದೆ. ಈ ಮೂರು ನಗರಗಳಲ್ಲಿ ಯಾವ ಮೈದಾನದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ. ನಾಕೌಟ್ ಪಂದ್ಯಗಳು ಹಾಗೂ ಪೈನಲ್ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಇನ್ನಷ್ಟೇ ಹೊರಬೀಳಬೇಕಿದೆ. ಆದಾಗ್ಯೂ ಕದನ ವಿರಾಮ ಘೋಷಣೆಯಾಗಿರುವುದರಿಂದ ಬೇರೆ ಸ್ಥಳಗಳ ಬಗ್ಗೆಯೂ ಬಿಸಿಸಿಐ ಯೋಚಿಸಲಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow