ಕರ್ನಾಟಕದಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಮ್ಮತಿ: ಕೆಲವು ಷರತ್ತುಗಳು ಅನ್ವಯ

ಬೆಂಗಳೂರು: ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿ ಜನಪ್ರತಿನಿಧಿಗಳ ಸಮ್ಮತಿ ದೊರಕಿದೆ. ಕೆಲವು ಷರತ್ತುಗಳೊಂದಿಗೆ ವರದಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿ ಪಶ್ಚಿಮ ಘಟ್ಟಗಳ ಶ್ರೇಣಿಯನ್ನು ಉಳಿಸಿಕೊಳ್ಳಬಹುದು ಎನ್ನುವ ಸಲಹೆಯನ್ನೂ ನೀಡಲಾಗಿದೆ.
ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.
ಹಲವು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದ್ದು ಹೀಗಾಗಿ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು ಎಂದಿದ್ದಾರೆ.
ಹಲವು ಜನಪ್ರತಿನಿಧಿಗಳು ಈಗಾಗಲೇ ರಾಜ್ಯದಲ್ಲಿ 16114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಇದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಬಫರ್ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಖಾಲಿ ಇರುವ 16114 ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫರ್ ಆಗುತ್ತದೆ ಎಂಬ ಅಭಿಪ್ರಾಯವು ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಇರುವ 16114 ಚ.ಕಿ.ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1576 ಗ್ರಾಮಗಳ ಜನರ ಜೀವನೋಪಾಯಕ್ಕೆ ಅನಾನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಲಾಗಿದೆ. ಪಶ್ಚಿಮ ಘಟ್ಟ ಕೇವಲ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಘಟ್ಟ ಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ. ಮಿಗಿಲಾಗಿ ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯ ಹೊಣೆ ಕೇಂದ್ರದ್ದು ಆಗಿದೆ. ಹಾಗಾಗಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






