ಕರ್ನಾಟಕದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ: ಉಪನ್ಯಾಸಕರಿಂದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್!
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಬಂಧಿತರು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯೋಲಜಿ ಉಪನ್ಯಾಸಕ ಸಂದೀಪ್, ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯು ಕಾಲೇಜಿನಲ್ಲಿ ಓದುತ್ತಿದ್ದ ವೇಳೆ ಫಿಸಿಕ್ಸ್ ಉಪನ್ಯಾಸಕ ನರೇಂದ್ರ ನೋಟ್ಸ್ ಕೊಡುವ ನೆಪದಲ್ಲಿ ಆಕೆಯೊಂದಿಗೆ ಹತ್ತಿರವಾಗಿದ್ದ. ತದನಂತರ ಚಾಟ್ಗಳಲ್ಲಿ ಸಂಪರ್ಕ ಬೆಳೆಸಿದ ಆರೋಪಿಯು, ಆಕೆಯು ಬೆಂಗಳೂರಿಗೆ ಬಂದಾಗ ಮಾರತಹಳ್ಳಿಯ ಗೆಳೆಯನ ರೂಮ್ಗೆ ಕರೆದೊಯ್ದು ಅತ್ಯಾಚಾರ ಎಸಗಿದ.
ಅಪರಾಧದ ನಂತರ, ಬಯೋಲಜಿ ಉಪನ್ಯಾಸಕ ಸಂದೀಪ್ ಕೂಡ ಅತ್ಯಾಚಾರಕ್ಕೆ ಯತ್ನಿಸಿದಾಗ ವಿದ್ಯಾರ್ಥಿನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ಈ ವೇಳೆ ಸಂದೀಪ್, ಆಕೆಯ ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವ ಬೆದರಿಕೆ ನೀಡಿ ಅತ್ಯಾಚಾರ ಎಸಗಿದ್ದ. ಅನಂತರ, ಘಟನೆ ನಡೆದ ರೂಮ್ ಮಾಲೀಕನಾಗಿದ್ದ ಅನೂಪ್ ಕೂಡ ಸಿಸಿಟಿವಿ ಫುಟೇಜ್ ಇರುವುದಾಗಿ ಬೆದರಿಸಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ.
ಆರೋಪಿತರಿಂದ ನಿರಂತರ ಬೆದರಿಕೆ ಎದುರಿಸಿದ್ದ ವಿದ್ಯಾರ್ಥಿನಿ, ಕೊನೆಗೆ ಪೋಷಕರಿಗೆ ವಿಷಯ ತಿಳಿಸಿದ್ದಳು. ಪೋಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿ ದೂರು ದಾಖಲಿಸಿದ್ದಾರೆ. ಮಹಿಳಾ ಆಯೋಗದ ಸಲಹೆಯಂತೆ, ಮಾರತಹಳ್ಳಿ ಠಾಣೆಯಲ್ಲಿ ಅಧಿಕೃತ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಾರತಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದು, ಇವರು ಈ ಹಿಂದೆ ಮತ್ತಿತರ ವಿದ್ಯಾರ್ಥಿನಿಯರ ಮೇಲೂ ಲೈಂಗಿಕ ಕಿರುಕುಳ ನೀಡಿದ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ತನಿಖೆ ತೀವ್ರಗೊಳಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?