ರಸ್ತೆಗುಂಡಿ ಸಮಸ್ಯೆ: ಜನರ ಕಷ್ಟ ನಿಮ್ಗೆ ಗೊತ್ತಾಗ್ತಿಲ್ವಾ - ಅಧಿಕಾರಿಗಳಿಗೆ ಸಿಎಂ ತರಾಟೆ
ಬೆಂಗಳೂರು ನಗರದಲ್ಲಿ ರಸ್ತೆ ಗುಂಡಿ (pothole) ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶನಿವಾರ ಅಧಿಕಾರಿಗಳ ಸಭೆ ನಡೆಸಿದ ಸಿಎಂ, “ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವೇ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ?” ಎಂದು ಪ್ರಶ್ನಿಸಿ ಅಧಿಕಾರಿಗಳು ಹಾಗೂ ಎಂಜಿನಿಯರ್ಗಳ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು.
ನಗರದ ಎಲ್ಲಾ ರಸ್ತೆಗಳಲ್ಲಿರುವ ಗುಂಡಿಗಳನ್ನು ಒಂದು ತಿಂಗಳೊಳಗೆ ಮುಚ್ಚುವಂತೆ ಗಡುವು ನೀಡಿದ ಸಿಎಂ, “ಪ್ರತಿ ವಾರ್ಡ್ನ ಎಂಜಿನಿಯರ್ಗಳು ಮತ್ತು ಮುಖ್ಯ ಎಂಜಿನಿಯರ್ಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ರಸ್ತೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಎಚ್ಚರಿಸಿದರು.
ಇದೇ ವೇಳೆ ಗುತ್ತಿಗೆದಾರರೊಂದಿಗೆ ಶಾಮೀಲಾಗದೆ, ಸರ್ಕಾರ ನೀಡಿರುವ ಅನುದಾನವನ್ನು ಬಳಸಿ ಗುಣಮಟ್ಟದ ಹಾಗೂ ವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ನಗರದಲ್ಲಿ ನಿರಂತರ ಮಳೆ ಹಾಗೂ ಗುಣಮಟ್ಟದ ಕೊರತೆಯಿಂದ ರಸ್ತೆ ಗುಂಡಿ ಸಮಸ್ಯೆ ತೀವ್ರಗೊಂಡಿದ್ದು, ಐಟಿ ದಿಗ್ಗಜರಿಂದ ಹಿಡಿದು ಸಾಮಾನ್ಯ ನಾಗರಿಕರ ವರೆಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?