ಗಂಡನ ನದಿಗೆ ತಳ್ಳಿದ ಕೇಸ್ ಬಿಗ್ ಟ್ವಿಸ್ಟ್: ಪತಿ ತಾತಪ್ಪ ವಿರುದ್ಧ POCSO ಪ್ರಕರಣ ದಾಖಲು!

ರಾಯಚೂರು: ಜಿಲ್ಲೆಯ ಗುರ್ಜಾಪುರ ಬ್ಯಾರೇಜ್ ಬಳಿ ಪತ್ನಿಯೇ ತಾನು ನದಿಗೆ ತಳ್ಳಿದ್ದಾಳೆ ಎಂದು ಆರೋಪಿಸಿದ್ದ ಪತಿ ತಾತಪ್ಪ ಈಗ ಮತ್ತೊಂದು ಸಂಕಷ್ಟ ಎದುರಿಸುತ್ತಿದ್ದಾರೆ. ತಾನು ಅಪ್ರಾಪ್ತೆಯಾದಾಕೆ ವಿವಾಹವಾದ ಹಿನ್ನೆಲೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯಿದೆ 2006ರಡಿಯಲ್ಲಿ ಪ್ರಕರಣದಲ್ಲಿ ಸಿಲುಕಿರುವ ತಾತಪ್ಪ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯ ಆರೋಪದಡಿ, ಪೋಕ್ಸೋ ಕಾಯಿದೆ (POCSO Act 2012) ಅಡಿಯೂ ಪ್ರಕರಣ ದಾಖಲಾಗಿದ್ದು, ಆತನ ಬಂಧನಕ್ಕೆ ಸಾಧ್ಯತೆಗಳು ಹೆಚ್ಚಾಗಿದೆ.
ಇತ್ತೀಚೆಗೆ ನಡೆದ ಘಟನೆಯಲ್ಲಿ, ಗುರ್ಜಾಪುರ ಬ್ರಿಡ್ಜ್ ಬಳಿಯ ಬ್ಯಾರೇಜ್ ಮೇಲೆ ನಿಂತು ಫೋಟೋ ತೆಗೆಯುವ ನೆಪದಲ್ಲಿ ಪತ್ನಿಯೇ ತಾತಪ್ಪನನ್ನು ನದಿಗೆ ತಳ್ಳಿದ್ದಾಳೆ ಎಂಬ ಆರೋಪದಿಂದ ಈ ಪ್ರಕರಣ ಉದ್ಭವಿಸಿತು. ಪತ್ನಿ ಅಪ್ರಾಪ್ತೆಯಾಗಿರುವುದು ಬೆಳಕಿಗೆ ಬಂದ ಬಳಿಕ, ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು.
ಮಕ್ಕಳ ಹಕ್ಕುಗಳ ಆಯೋಗದ ಸೂಚನೆಯ ಮೇರೆಗೆ, ಆರಂಭದಲ್ಲಿ ರಾಯಚೂರು ಮಹಿಳಾ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯಿದೆ ಅಡಿಯಲ್ಲಿ ಮಾತ್ರ ಪ್ರಕರಣ ದಾಖಲಾಗಿತ್ತು. ಆದರೆ ಪೋಕ್ಸೋ ಕಾಯಿದೆ ಅಡಿ ಕೇಸ್ ದಾಖಲಾಗದಿರುವುದರಿಂದ, ಮಕ್ಕಳ ಹಕ್ಕುಗಳ ಆಯೋಗ ರಾಜ್ಯ ಮಹಿಳಾ ಪೊಲೀಸ್ ಠಾಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಖುದ್ದು ಐಜಿಗೆ ದೂರು ಸಲ್ಲಿಸಿತು.
ಈ ಬೆಳವಣಿಗೆಯ ಮಧ್ಯೆ, ಪೊಲೀಸರು ತಾತಪ್ಪನ ವಿರುದ್ಧ ಪೋಕ್ಸೋ ಕಾಯಿದೆ ಅಡಿಯಲ್ಲಿ ಹೊಸ ಪ್ರಕರಣ ದಾಖಲಿಸಿದ್ದು, 10 ಮಂದಿ ವಿರುದ್ಧವೂ ಇದೇ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವನ್ನೆ ಗೆದ್ದ ತಾತಪ್ಪನಿಗೆ ಈಗ ಅಪ್ರಾಪ್ತ ಪತ್ನಿಯ ಹೇಳಿಕೆಯೇ ಜೈಲಿನ ಬಾಗಿಲು ತೋರಿಸುವಂತಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






