ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ ಶಿವ ಶಿವಾ: ಡಿಕೆಶಿಗೆ ಟಾಂಗ್ ಕೊಟ್ಟ HDK

ಬೆಂಗಳೂರು: ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ ಶಿವ ಶಿವಾ ಎಂದು ಪೆನ್ನೂ ಪೇಪರ್ ಕೇಳಿದ್ದ ಡಿಕೆಶಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಕುರ್ಚಿ ಹತ್ತಲು ಚಾತಕ ಪಕ್ಷಿಯಂತೆ ನಿದ್ದೆಗೆಟ್ಟು, 'ಒಂದ್ ಸಲ ನಂಗೂ ಪೆನ್ನೂ-ಪೇಪರ್ ಕೊಡಿ' ಎಂದು ಸಮುದಾಯದ ಮುಂದೆ ಮಂಡಿಯೂರಿ ಗೋಗರೆದ ವ್ಯಕ್ತಿ ಸಿದ್ದಷಡ್ಯಂತ್ರ್ಯ ವರದಿಗೆ ಶಿರಬಾಗಿ ಸಮ್ಮತಿಸಿಸುವರೇ..?
ಹಿಂದೊಮ್ಮೆ ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಷೀಣದನಿಯಲ್ಲಿ ಗಣತಿ ವರದಿಯನ್ನು ವಿರೋಧಿಸಿದ್ದವರು ಈಗ ನಾಲಿಗೆ ಬದಲಿಸಿದ್ದಾರೆ!! ಶಿವ.. ಶಿವಾ.. ಎಂದು ಡಿಸಿಎಂ ಡಿಕೆಶಿಗೆ ಟಾಂಗ್ ನೀಡಿದ್ದಾರೆ. 'ನಾನ್ ಒಂದು ನ್ಯಾಷನಲ್ ಪಾರ್ಟಿ ಸ್ಟೇಟ್ ಪ್ರೆಸಿಡೆಂಟ್ ಕಣ್ರೀ.. ನಂಗೆ ಎಲ್ರೂ ಸಮಾನ! ಈಗಷ್ಟೇ ಕಣ್ ತೆರೆದಿದ್ದೇವೆ.
ಗಣತಿಗೆ ಯಾರ ವಿರೋಧವೂ ಇಲ್ಲ, ವಿರೋಧವಾದ್ರೂ ಯಾಕಿರುತ್ತೆ ಹೇಳಿ?ʼ ಎಂದ್ಹೇಳಿ ಪ್ರಶ್ನಿಸಿದ ಸುದ್ದಿಗಾರರನ್ನೇ ತಳ್ಳಿಕೊಂಡು ಪಲಾಯನಗೈದರಲ್ಲಾ..? ಪೆನ್ನೂ ಪೇಪರ್ ಕೊಟ್ಟ ಪಾಪಕ್ಕೆ ಒಕ್ಕಲಿಗ ಸಮಾಜ ಬೆಲೆ ತೆರುತ್ತಿದೆ. ಕುರ್ಚಿ ದುರಾಸೆಗೆ ಈ ವ್ಯಕ್ತಿ ಅದೇ ಪೆನ್ನಿನಲ್ಲಿ ಸಮಾಜದ ಮರಣಶಾಸನ ಬರೆಯುತ್ತಿದ್ದಾರೆ!! ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಣತಿ ಗ್ಯಾರಂಟಿ ರಾಜ್ಯದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಲು ಹೂಡಿದ ಷಡ್ಯಂತ್ರ್ಯವೇ? ಅಥವಾ ಸರಣಿ ದರ ಏರಿಕೆ, ಸಾಲುಸಾಲು ಭ್ರಷ್ಟ ಹಗರಣಗಳ ಮುಜುಗರದಿಂದ ಮುಖ ಮುಚ್ಚಿಕೊಳ್ಳಲು ಜನರ ಗಮನ ಬೇರೆಡೆಗೆ ಹೊರಳಿಸಲು ರೂಪಿಸಿದ ಸಂಚೇ? ಎಂದು ಶಂಕೆ ವ್ಯಕ್ತಪಡಿಸಿರುವ ಅವರು; ಇಡೀ ರಾಜ್ಯವು ಜಾತಿ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿದ್ದರೆ, ಕಾಂಗ್ರೆಸ್ ಸರ್ಕಾರದ ಈ ನಡೆ ಕೆಲ ನಿರ್ದಿಷ್ಟ ಸಮುದಾಯಗಳ ಮೇಲೆ ರಾಜಕೀಯ, ಸಾಮಾಜಿಕವಾಗಿ ಹಗೆತನ ಸಾಧಿಸುವ ಮುಂದುವರಿದ ಅಧ್ಯಾಯವೇ? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






