ಜಮೀರ್ʼಗೆ ಸಾಲ ಕೊಟ್ಟಿದ್ದ ರಾಧಿಕಾಗೆ ಲೋಕಾ 'ಶಾಕ್'! ಕೋಟಿ ಕೋಟಿ ಹಣಕಾಸು ವ್ಯವಹಾರ ಆರೋಪ
ನಟಿ ರಾಧಿಕಾ ಕುಮಾರಸ್ವಾಮಿವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಿಗೆ 2 ಕೋಟಿ ರೂ. ಹಣಕಾಸು ನೆರವು ನೀಡಿದ ವಿಚಾರವಾಗಿ ಕಳೆದ ವಾರ ಲೋಕಾಯುಕ್ತ ವಿಚಾರಣೆಗೆ ನಟಿ ಹಾಜರಾಗಿದ್ದಾರೆ. ವಿಚಾರಣೆ ವೇಳೆ ಅವರು ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019ರಲ್ಲಿ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿತ್ತು. ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯಲ್ಲಿ, ಅವರಿಗೆ ಹಲವು ಮೂಲಗಳಿಂದ ಹಣಕಾಸು ನೆರವು ದೊರೆತಿರುವ ದಾಖಲೆಗಳು ಸಿಕ್ಕಿದ್ದವು. ಅದರಲ್ಲಿ ರಾಧಿಕಾ ಕುಮಾರಸ್ವಾಮಿ ನೀಡಿದ ನೆರವೂ ಸೇರಿದೆ ಎಂದು ತಿಳಿದುಬಂದಿದೆ.
ಆ ಸಮಯದಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಜಮೀರ್ ಅಹ್ಮದ್ ಖಾನ್ ಸಚಿವರಾಗಿದ್ದರು. ನಂತರ ಭ್ರಷ್ಟಾಚಾರ ವಿಗ್ರಹದಳ (ACB) ಜಮೀರ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಎಸಿಬಿ ವಿಲೀನಗೊಂಡ ಹಿನ್ನೆಲೆಯಲ್ಲಿ, ಆ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಮುಂದುವರಿಸಿತು. ಅದರಂತೆ ರಾಧಿಕಾ ಕುಮಾರಸ್ವಾಮಿಗೆ ನೋಟಿಸ್ ನೀಡಲಾಗಿತ್ತು.
2012ರಲ್ಲಿ ಶಮಿಕಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಯಶ್ ಮತ್ತು ರಮ್ಯಾ ಅಭಿನಯದ ಚಿತ್ರ ನಿರ್ಮಾಣ ಮಾಡಿದ್ದು ಅದರ ಯಶಸ್ಸು ಮತ್ತು ಸ್ಯಾಟಲೈಟ್ ಹಕ್ಕಿನಿಂದ ದೊರೆತ ಲಾಭಾಂಶದಲ್ಲಿ ಎರಡು ಕೋಟಿ ರೂಪಾಯಿಯನ್ನು ಸಚಿವರಿಗೆ ನೀಡಿದ್ದಾಗಿ ರಾಧಿಕಾ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಸದ್ಯ ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿಕೊಂಡಿರುವ ಲೋಕಾಯುಕ್ತರು, ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಮ್ಮ ಪ್ರತಿಕ್ರಿಯೆ ಏನು?