ತುಮಕೂರು: 70 ಲಕ್ಷ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ನೋಟಿಸ್!

ತುಮಕೂರು: ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ತುಮಕೂರಿನ ಸಿದ್ದಗಂಗಾ ಮಠಕ್ಕೆ ನೀರಾವರಿ ಯೋಜನೆಯ ವಿದ್ಯುತ್ ಬಿಲ್ 70 ಲಕ್ಷ ರೂಪಾಯಿ ಪಾವತಿಸಿ ಎಂದು ಸಿದ್ದಗಂಗಾ ಮಠಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಪತ್ರ ಬರೆದಿದೆ. ಹೌದು ಸರ್ಕಾರಿ ನೀರಾವರಿ ಯೋಜನೆಗೆ ಕೆಐಎಡಿಬಿ ಬಳಸಿದ ಬರೊಬ್ಬರಿ 70,31,438 ರೂ. ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಭರಿಸುವಂತೆ ಕೆಐಎಡಿಬಿ ಪತ್ರ ಬರೆದಿದೆ. ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ ಅನ್ನು ಭರಿಸುವಂತೆ ಕೋರಲಾಗಿದೆ ಎಂದು ಪತ್ರದಲ್ಲಿ ಒಕ್ಕಣೆ ಬರೆಯಲಾಗಿದೆ.
ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ ಕೆಐಎಡಿಬಿ ಪೈಪ್‌ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್‌ನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಈಗ ವಿವಾದಕ್ಕೆ ಕಾರಣವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






