ದೇವರಿಗೆ ತೆಂಗಿನಕಾಯಿ ಹಾಗೂ ಬಾಳೆಹಣ್ಣನ್ನು ಮಾತ್ರ ದೇವಸ್ಥಾನಕ್ಕೆ ಅರ್ಪಿಸೋದು ಯಾಕೆ ಗೊತ್ತಾ!?
ಹಿಂದೂ ಧರ್ಮದಲ್ಲಿ, ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ದೈನಂದಿನ ಪೂಜೆಯ ಮಾರ್ಗವೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯ ಪೂಜೆ ಮತ್ತು ಮಂತ್ರ ಪಠಣದಿಂದ ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಮತ್ತು ದೇವರಲ್ಲಿ ನಂಬಿಕೆ ಹುಟ್ಟುತ್ತದೆ. ಪೂಜೆಯೂ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯಾವುದೇ ಕಠಿಣ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹುಟ್ಟುಹಾಕುತ್ತದೆ.
ದೇವಸ್ಥಾನಕ್ಕೆ ಹೋಗುವ ವಿಚಾರವಾಗಲಿ, ಅಲ್ಲಿ ಪೂಜೆ ಮಾಡಿಸುವ ಪದ್ಧತಿಗಾಗಲಿ ಕೂಡ ಹಲವಾರು ನೀತಿ-ನಿಯಮಗಳಿವೆ. ಸಾಮಾನ್ಯವಾಗಿ ದೇವಸ್ಥಾನಕ್ಕೆ ಪೂಜೆಗೆ ಹೋಗುವಾಗ ಹೂ, ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ತೆಗೆದುಕೊಂಡು ಹೋಗಲಾಗುತ್ತದೆ. ನೀವಿಲ್ಲಿ ಗಮನಿಸಿರಬಹುದು, ನಾವು ದೇವಸ್ಥಾನಕ್ಕೆ ಹೋಗುವಾಗ ಬಾಳೆಹಣ್ಣು, ತೆಂಗಿನಕಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ. ಬಾಳೆಹಣ್ಣಿನ ಬದಲು ಮಾವು, ಸೇಬು ಇವುಗಳನ್ನೆಲ್ಲಾ ತೆಗೆದುಕೊಂಡು ಹೋಗುವುದೇ ಇಲ್ಲ. ಅರೇ, ಹೀಗ್ಯಾಕೆ ಎಂದು ಎಂದಾದರೂ ಯೋಚಿಸಿದ್ದೀರಾ
ಹಾಗಾದ್ರೇ ಏಕೆ ದೇವಸ್ಥಾನಗಳಿಗೆ ಹೋಗುವಾಗ ಕೇವಲ ಬಾಳೆಹಣ್ಣು, ತೆಂಗಿನಕಾಯಿ ಮಾತ್ರ ಅರ್ಪಿಸಲಾಗುತ್ತದೆ ಅನ್ನೋದನ್ನು ಇಲ್ಲಿ ನೋಡೋಣ. ದೇವಸ್ಥಾನಗಳಲ್ಲಿ ತೆಂಗಿನಕಾಯಿ ಮತ್ತು ಬಾಳೆಹಣ್ಣನ್ನು ಮಾತ್ರ ಏಕೆ ಅರ್ಪಿಸಲಾಗುತ್ತದೆ? ಮೇಲೆ ಹೇಳಿದಂತೆ ಹಿಂದೂ ಸಂಪ್ರದಾಯಗಳಲ್ಲಿ ಎಲ್ಲಾ ಆಚರಣೆಗಳ ಹಿಂದೆ ಒಂದೊಂದು ಅದರದ್ದೇ ಕಾರಣ ಇರುವಂತೆ ಬಾಳೆಹಣ್ಣು, ತೆಂಗಿನಕಾಯಿ ಮಾತ್ರ ತೆಗೆದುಕೊಂಡು ಹೋಗುವುದರ ಹಿಂದೆಯೂ ಕಾರಣ ಇದೆ.
ತೆಂಗಿನಕಾಯಿ ಮತ್ತು ಬಾಳೆಹಣ್ಣು ಮಂಗಳಕರ: ಹಿಂದೂ ಧರ್ಮದಲ್ಲಿ ಈ ಎರಡೂ ಅಂದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣುಗಳನ್ನು ಪವಿತ್ರ ಎಂದು ಪರಿಗಣಿಸಲಾಗಿದೆ. ಪೂಜೆಗೆ ಇವೆರೆಡು ಇರಲೇಬೇಕು. ನೈವೇದ್ಯಕ್ಕೆ ಬಾಳೆಹಣ್ಣು, ಪೂಜೆ ಮಾಡಲು ತೆಂಗಿನಕಾಯಿ ಕಡ್ಡಾಯವಾಗಿದೆ. ಪ್ರಸಾದಕ್ಕೂ ಸಹ ಇವುಗಳನ್ನೇ ಬಳಸಲಾಗುತ್ತದೆ. ಭಕ್ತರು ಸಹ ದೇವಸ್ಥಾನಕ್ಕೆ ಹಣ್ಣು-ಕಾಯಿ ಮಾಡಿಸುವಾಗ ಮುಖ್ಯವಾಗಿ ಮಂಗಳಕರ ಎಂದು ಭಾವಿಸಲಾಗಿರುವ ಈ ಎರಡನ್ನೂ ತೆಗೆದುಕೊಂಡು ಬರುತ್ತಾರೆ.
ಒಮ್ಮೆ ಒಡೆದರೆ ಸಂತಾನೋತ್ಪತ್ತಿ ಸಾಮರ್ಥ್ಯ ಇರುವುದಿಲ್ಲ: ಬೇರೆ ಹಣ್ಣು, ಕಾಯಿ ಬೀಜ ಹೊಂದಿದ್ದು, ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹಾಗಂತ ತೆಂಗಿನ ಕಾಯಿಯಿಂದಲೂ ಮೊಳಕೆ ಬರಿಸಬಹುದು. ಆದರೆ ಅದನ್ನು ಒಮ್ಮೆ ಒಡೆದು ತಿಂದರೆ ಅದರಿಂದ ಮೊಳಕೆ ಬರಲು ಸಾಧ್ಯವಿಲ್ಲ. ನೀವು ತೆಂಗಿನ ಮರವನ್ನು ಬೆಳೆಸಬೇಕಾದರೆ, ನೀವು ಸಂಪೂರ್ಣ ತೆಂಗಿನಕಾಯಿಯನ್ನು ಬಿತ್ತಬೇಕಾಗುತ್ತದೆ
ಇನ್ನೂ ಬಾಳೆ ಮರ ಕೂಡ ಹಾಗೇ. ಈಗೀಗ ಇದರಲ್ಲಿ ಬೀಜಗಳು ಬರುತ್ತಿವೆಯಾದರೂ, ಇವುಗಳ ಸಸಿ ನಡೆಯುವ ಮೂಲಕವೇ ಗಿಡನೆಡುವ ಕಾರ್ಯ ನಡೆಸಲಾಗುತ್ತದೆ. ಬಾಳೆಹಣ್ಣನ್ನು ಒಮ್ಮೆ ಸಿಪ್ಪೆ ತೆಗೆದು ಬಳಸಿದರೆ ಅದನ್ನು ನಡೆಲಾಗುವುದಿಲ್ಲ. ಹೀಗಾಗಿ ಬಾಳೆ ಹಣ್ಣನ್ನು ದೇವರ ಪೂಜೆಗೆ ಅರ್ಹ ಮತ್ತು ಮಂಗಳಕರವಾಗಿ ಬಳಸಬಹುದೆಂಬ ನಂಬಿಕೆ ಇದೆ.
ಅಹಂಕಾರ ಬಿಡಿ ಎಂದ ಸಂದೇಶ ಸಾರುವ ತೆಂಗಿನಕಾಯಿ: ಈ ಮೇಲಿನದ್ದು ಒಂದು ಕಾರಣವಾದರೆ, ಮತ್ತೊಂದು ಅಹಂಕಾರವನ್ನು ತೊರೆಯಿರಿ ಎಂಬ ಒಂದು ಸಂದೇಶದಿಂದಾಗಿಯೂ ತೆಂಗಿನಕಾಯಿಯನ್ನು ಬಳಸಲಾಗುತ್ತದೆ.
ತೆಂಗಿನ ಕಾಯಿ ಚಿಪ್ಪನ್ನು ಅಹಂಕಾರ ಎಂದು ಭಾವಿಸಿದರೆ, ಒಳಗಿನ ಬಿಳಿ ಕೋಮಲ ತೆಂಗಿನಕಾಯಿಯನ್ನು ಮನಸ್ಸು ಎಂದು ಪರಿಗಣಿಸಲಾಗುತ್ತದೆ. ದೇವಸ್ಥಾನದ ಒಳಗೆ ಬರುವಾಗ ನಿನ್ನ ಅಹಂಕಾರ ಬಿಟ್ಟು ಶುದ್ಧ ಮನಸ್ಸಿನಿಂದ ಬಾ ಮತ್ತು ಭಕ್ತಿಯು ಅದರಲ್ಲಿ ಸಿಹಿನೀರಿನಂತಿರಲಿ ಎನ್ನುವ ಸಂದೇಶ ಇದರಲ್ಲಿದೆ. ಮೇಲ್ಭಾಗದಲ್ಲಿರುವ 3 ಕಣ್ಣುಗಳು ಸತ್ವ, ರಾಜ ಮತ್ತು ತಮ ಅಥವಾ ಭೂತ, ವರ್ತಮಾನ ಮತ್ತು ಭವಿಷ್ಯ ಅಥವಾ ಸ್ಥೂಲ, ಸೂಕ್ಷ್ಮ ಮತ್ತು ಕರಣ ಶರೀರ ಅಥವಾ ದೇಹ ಇತ್ಯಾದಿ ಎಂಬುದನ್ನು ವಿವರಿಸುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?