ನೀವು ನಿತ್ಯ ದೇವರಿಗೆ ಪೂಜೆ ಮಾಡ್ತೀರಾ!? ಹಾಗಿದ್ರೆ ಎಷ್ಟು ಅಗರಬತ್ತಿ ಹಚ್ಚಬೇಕು?

ಹಿಂದೂ ಧರ್ಮದಲ್ಲಿ, ನಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ತೊಂದರೆಗಳನ್ನು ತೊಡೆದುಹಾಕಲು ದೈನಂದಿನ ಪೂಜೆಯ ಮಾರ್ಗವೇ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ನಿತ್ಯ ಪೂಜೆ ಮತ್ತು ಮಂತ್ರ ಪಠಣದಿಂದ ಆಧ್ಯಾತ್ಮಿಕ ಬೆಳವಣಿಗೆಯಾಗುತ್ತದೆ ಮತ್ತು ದೇವರಲ್ಲಿ ನಂಬಿಕೆ ಹುಟ್ಟುತ್ತದೆ. ಪೂಜೆಯೂ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡುತ್ತದೆ. ನಮ್ಮಲ್ಲಿ ಯಾವುದೇ ಕಠಿಣ ಕಾರ್ಯವನ್ನು ಮಾಡುವ ಸಾಮರ್ಥ್ಯವನ್ನು ಹುಟ್ಟುಹಾಕುತ್ತದೆ. ಪೂಜೆಯು ನಮ್ಮ ಇಂದ್ರೀಯಗಳ ಮೇಲೆ ನಿಯಂತ್ರಿಸುವುದಕ್ಕೂ ಸಹಕಾರಿಯಾಗಿದೆ. ಮತ್ತು ನಾವು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಲು ಶಕ್ತರನ್ನಾಗಿಸುತ್ತದೆ.
ಪ್ರತಿಯೊಬ್ಬರ ಮನೆಯಲ್ಲೂ ದೇವರಿಗಾಗಿ ಪ್ರತ್ಯೇಕ ಕೋಣೆ ಮೀಸಲಿಟ್ಟು, ಆ ಪವಿತ್ರ ಸ್ಥಳದಲ್ಲಿ ದೇವರ ಪೂಜೆ ಮಾಡಲಾಗುತ್ತದೆ. ಧೂಪ ದೀಪದ ಆರತಿಗಳಿಂದ ಪೂಜೆ ಮಾಡಿದಾಗ ಮನೆಯಲ್ಲಿ ಅದು ಬೀರುವ ಪರಿಮಳದಿಂದಲೇ ಎಲ್ಲರ ಮನಸ್ಸು ಉಲ್ಲಾಸಗೊಳ್ಳುತ್ತೆ. ಹಲವು ರೀತಿಯ ಸುಂಗಂಧಗಳನ್ನು ಹೊಂದಿದ ಊದಿನಕಡ್ಡಿಗಳು ಮನೆಯ ತುಂಬ ತಮ್ಮ ಕುರುಹನ್ನು ಮೂಡಿಸುತ್ತವೆ.
ಊದಿನಕಡ್ಡಿ ಗಳನ್ನು ಹಚ್ಚದೇ ಯಾವ ಪೂಜೆಯೂ ನಡೆಯುವುದಿಲ್ಲ. ಊದಿನ ಕಡ್ಡಿಯಿಂದ ಆರತಿ ಮಾಡಿದಾಗಲೇ ಪೂಜೆ ಸಂಪೂರ್ಣವಾಗುತ್ತೆ. ಪೂಜೆಯ ಸಮಯದಲ್ಲಿ ಊದಿನಕಡ್ಡಿಯ ಆರತಿಯನ್ನು ಬೆಳಗುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಪೂಜೆಯ ಸಮಯದಲ್ಲಿ ಎಲ್ಲರೂ ಊದಿನಕಡ್ಡಿಯನ್ನು ಹಚ್ಚುತ್ತಾರೆ. ಕೆಲವರು ಒಂದು, ಕೆಲವರು ಎರಡು ಹಾಗೂ ಇನ್ಕೆಲವರಿಗೆ ಮೂರು ಊದಿನಕಡ್ಡಿಗಳನ್ನು ಹಚ್ಚುವ ಅಭ್ಯಾಸವಿರುತ್ತೆ. ಹಾಗೆ ದೇವರ ಮುಂದೆ ಊದಿನಕಡ್ಡಿಗಳನ್ನು ಹಚ್ಚುವಾಗ ನಾವು ಎಷ್ಟು ಊದಿನ ಕಡ್ಡಿಗಳನ್ನು ಹಚ್ಚಬೇಕು, ಎಷ್ಟು ಹಚ್ಚಿದರೆ ಶುಭ, ಎಷ್ಟು ಊದಿನ ಕಡ್ಡಿಗಳನ್ನು ಹಚ್ಚಬಾರದು ಅನ್ನೋದನ್ನಾ ನಾವು ತಿಳಿಸಿಕೊಡ್ತೇವೆ.
ದೇವರ ಮುಂದೆ ಊದಿನಕಡ್ಡಿಗಳನ್ನು ಹಚ್ಚುವಾಗ ಎಷ್ಟು ಕಡ್ಡಿಗಳನ್ನು ಹಚ್ಚಬೇಕು ಎನ್ನವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ. ಪೂಜೆ ಮಾಡುವ ಸಮಯದಲ್ಲಿ ಮೂರು ಅಥವಾ ಐದು ಊದಿನಕಡ್ಡಿಗಳನ್ನು ಹಚ್ಚುವುದು ಅತ್ಯಂತ ಶುಭವಾಗಿದೆ. ಹಿಂದೂ ಶಾಸ್ತ್ರಗಳ ಪ್ರಕಾರ, ಕೇವಲ ಒಂದು ಕಡ್ಡಿಯನ್ನು ಹಚ್ಚುವುದು ಅಶುಭವಾಗಿದೆ. ಒಂಟಿ ಊದಿನಕಡ್ಡಿ ಋಣಾತ್ಮಕ ಸಂಕೇತವನ್ನು ನೀಡುತ್ತದೆ. ಮೂರು ಊದಿನಕಡ್ಡಿ ಹಚ್ಚುವುದು ಬಹಳ ಒಳ್ಳೆಯದು. ಏಕೆಂದರೆ, ಮೂರು ಎಂದರೆ ತ್ರಿದೇವರನ್ನು ಸೂಚಿಸುತ್ತದೆ.
ದೇವರ ಕೋಣೆ ಎಂದ ಮೇಲೆ ಅಲ್ಲಿ ಹಲವಾರು ಮೂರ್ತಿಗಳನ್ನು ಇಡಲಾಗುತ್ತದೆ. ನಿತ್ಯದ ಪೂಜೆಯ ಹೊರತಾಗಿ ನೀವು ಬೇರೆ ಪೂಜೆಯನ್ನೋ ಅಥವಾ ಮನೆಯಲ್ಲಿ ಯಾವುದಾದರೂ ವಿಶೇಷ ಪೂಜೆಯನ್ನು ಮಾಡುವಾಗ ಆ ದೇವರಿಗೆಂದೇ ಬೇರೆ ಊದಿನಕಡ್ಡಿಯನ್ನು ಹಚ್ಚಬೇಕು. ಕೆಲವರು ಊದಿನ ಕಡ್ಡಿಯನ್ನು ಹಚ್ಚಿ ಅದನ್ನು ಬಾಯಿಯಲ್ಲಿ ಊದಿ ಆರಿಸಿ ನಂತರ ಅದನ್ನು ದೇವರಿಗೆ ಹಚ್ಚುತ್ತಾರೆ. ಹಾಗೆ ಊದಿನಕಡ್ಡಿಯನ್ನು ಬಾಯಿಯಿಂದ ಆರಿಸುವುದು ಒಳ್ಳೆಯದಲ್ಲ. ಊದಿನಕಡ್ಡಿಯನ್ನು ಬಾಯಿಯಿಂದ ಆರಿಸದೇ ಕೈಯಿಂದಲೇ ಆರಿಸಿ ದೇವರಿಗೆ ಹಚ್ಚಬೇಕು.
ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಲಬೆರಕೆಯ ಊದಿನಕಡ್ಡಿಗಳೇ ಹೆಚ್ಚು ಸಿಗುತ್ತಿವೆ. ಅವುಗಳಲ್ಲಿ ಯಾವುದೇ ಸುಗಂಧ ಇರುವುದಿಲ್ಲ. ಅದರ ಬದಲಾಗಿ ಅದರಿಂದ ಹೊರಬರುವ ಹೊಗೆಯಿಂದ ಜನರಿಗೆ ಉಬ್ಬಸ ಮುಂತಾದ ತೊಂದರೆಗಳು ಉಂಟಾಗುತ್ತಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಊದಿನಕಡ್ಡಿಗಳನ್ನು ಖರೀದಿಸುವಾಗ ಪರಿಮಳಯುಕ್ತ ಊದಿನಕಡ್ಡಿಗಳನ್ನೇ ಆರಿಸಿ ತೆಗೆದುಕೊಳ್ಳಬೇಕು. ಪರಿಮಳವಿಲ್ಲದ ಊದಿನಕಡ್ಡಿಗಳನ್ನು ದೇವರಿಗೆ ಅರ್ಪಿಸಬಾರದು. ಶಾಸ್ತ್ರಗಳ ಪ್ರಕಾರ, ಸ್ವಚ್ಛವಾದ ಹಾಗೂ ಒಳ್ಳೆಯ ಊದಿನಕಡ್ಡಿಯನ್ನೇ ಬೆಳಗಬೇಕು. ಮುರಿದ ಹಾಗೂ ಹಾಳಾದ ಕಡ್ಡಿಗಳನ್ನು ದೇವರಿಗೆ ಹಚ್ಚಬಾರದು.
ಪೂಜೆಗೆ ವಿಘ್ನಗಳನ್ನು ಉಂಟುಮಾಡುವ ಅಥವಾ ಅಪಶಕುನ ಎಂದು ಹೇಳಲಾಗುವ ಅನೇಕ ವಸ್ತು ಹಾಗೂ ವಿಷಯಗಳಿವೆ. ಅಂತಹವುಗಳನ್ನು ಪೂಜೆಯ ಸಮಯದಲ್ಲಿ ಉಪಯೋಗಿಸುವುದಿಲ್ಲ. ಒಂಟಿ ಆರತಿ, ಒಂಟಿ ದೀಪ, ಹಾಳಾದ ತೆಂಗಿನ ಕಾಯಿ ಇಂತಹ ಹಲವಾರು ವಸ್ತುಗಳು ಪೂಜೆಯಲ್ಲಿ ವರ್ಜ್ಯವಾಗಿದೆ. ಹಾಗೆಯೇ ಹೋಮ ಹವನಗಳಲ್ಲಿ ಕೂಡ ಎಲ್ಲ ರೀತಿಯ ಕಟ್ಟಿಗೆಗಳನ್ನು ಬಳಸುವುದಿಲ್ಲ. ಅವುಗಳನ್ನು ಬಳಸಿದರೆ ಪೂಜೆಯ ಫಲ ಸಿಗುವುದಿಲ್ಲ ಎಂಬ ನಂಬಿಕೆಯಿದೆ. ಅದೇ ರೀತಿಯಲ್ಲಿ ಊದಿನಕಡ್ಡಿಯನ್ನು ಖರೀದಿಸುವಾಗಲೂ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಊದಿನಕಡ್ಡಿ ಹಚ್ಚುವುದರಿಂದ ವಂಶ ವೃದ್ಧಿಯಾಗುವುದಿಲ್ಲ ಎಂಬ ನಂಬಿಕೆಯಿದೆ.
ಯಾವ ಪೂಜೆಯನ್ನಾದರೂ ನಾವು ನಮ್ಮ ಹಾಗೂ ಮನೆಯವರ ಏಳ್ಗೆಗಾಗಿಯೇ ಮಾಡುತ್ತೇವೆ. ಹಾಗಾಗಿ ಪೂಜೆಯನ್ನು ಮಾಡುವಾಗ ಅದರ ನಿಯಮ, ಪದ್ಧತಿ ಹಾಗೂ ಕಟ್ಟುಪಾಡುಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸರಿಯಾದ ಪದ್ಧತಿಯನ್ನು ಅನುಸರಿಸಿದಾಗ ಮಾತ್ರ ಪೂಜೆಯ ಸಂಪೂರ್ಣ ಫಲ ದೊರಕಲು ಸಾಧ್ಯ.
ನಿಮ್ಮ ಪ್ರತಿಕ್ರಿಯೆ ಏನು?






