ವಿಂಗ್ ಕಮಾಂಡರ್ʼನ ಮುಖವಾಡ ಕಳಚಿದ CCTV: ಕೊಲೆ ಯತ್ನ ಪ್ರಕರಣ ದಾಖಲು!

ಎಪ್ರಿಲ್ 22, 2025 - 14:00
 0  15
ವಿಂಗ್ ಕಮಾಂಡರ್ʼನ ಮುಖವಾಡ ಕಳಚಿದ CCTV: ಕೊಲೆ ಯತ್ನ ಪ್ರಕರಣ ದಾಖಲು!

ಬೆಂಗಳೂರು: ಡಿಆರ್‌ಡಿಓ ವಿಂಗ್‌ ಕಮಾಂಡರ್‌ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಭಾರೀ ಟ್ವಿಸ್ಟ್‌ ಸಿಕ್ಕಿದೆ. ಶಿಲಾದಿತ್ಯ ಬೋಸ್ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕನ್ನಡ ಹಾಗೂ ಹಿಂದಿ ಭಾಷೆ ಜಟಾಪಟಿ ಎನ್ನುವಂತೆ ಕಥೆ ಕಟ್ಟಿದ್ದರು. ಆದರೆ, ಇಡೀ ಪ್ರಕರಣದ ಸಿಸಿಟಿವಿ ಫೂಟೇಜ್‌ ಹೊರಬಂದಿದ್ದು, ಬೈಕ್‌ ಸವಾರ ವಿಕಾಸ್‌ ಮೇಲೆ ವಿಂಗ್‌ ಕಮಾಂಡರ್‌ ಮೊದಲಿಗರಾಗಿ ಹಲ್ಲೆ ಮಾಡಿರುವುದು ಗೊತ್ತಾಗಿದೆ.

ಇದೀಗ ಟೆಕ್ಕಿ ವಿಕಾಸ್ ಕುಮಾರ್ ನೀಡಿದ ದೂರಿನ ಹಾಗೂ ಘಟನಾ ಸ್ಥಳದ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್ ವಿರುದ್ಧವೇ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ. ಆದರೆ, ಎಫ್​ಐಆರ್​​ನಲ್ಲಿ ನೇರವಾಗಿ ವಿಂಗ್‌ ಕಮಾಂಡರ್‌ ಶಿಲಾದಿತ್ಯ ಬೋಸ್ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ.

ಎಫ್​ಐಆರ್​​ನಲ್ಲೇನಿದೆ?

ದೂರುದಾರರಾದ ವಿಕಾಸ ಕುಮಾರ್ ದಿನಾಂಕ 21 ರಂದು ಬೆಳಿಗ್ಗೆ, ಸುಮಾರು 6-20 ರ ಸಮಯದಲ್ಲಿ ತನ್ನ ಸ್ನೇಹಿತನ ಬೈಕ್ ವಾಪಸ್ಸು ನೀಡುವ ಸಂಬಂಧ ಅವರ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಮರೂನ್ ಕಲರ್ ಮಾರುತಿ ಸುಜುಕಿ ಎರ್ಟಿಗಾ ಕಾರ್​ನಲ್ಲಿ ಬಂದ ವ್ಯಕ್ತಿ ದ್ವಿ ಚಕ್ರ ವಾಹನಕ್ಕೆ ಟಚ್ ಮಾಡಿದ್ದಾರೆ. ನಂತರ ದೂರುದಾರರ ಬೈಕ್​ಗೆ ತಮ್ಮ ಕಾರನ್ನು ಅಡ್ಡ ಹಾಕಿ ತಡೆದು ನಿಲ್ಲಿಸಿ ತಮ್ಮ ಕಾರಿಗೆ ಏಕೆ ಟಚ್ ಮಾಡಿರುತ್ತೀಯಾ ಎಂದು ಪ್ರಶ್ನಿಸಿದ್ದಾರೆ.

ಅದಕ್ಕೆ ದೂರುದಾರರು, ಕಾರಿನಲ್ಲಿದ್ದ ವ್ಯಕ್ತಿಗೆ ನೀವೇ ನನ್ನ ಬೈಕ್​ಗೆ ಟಚ್ ಮಾಡಿದ್ದೀರಿ ಎಂದು ತಿಳಿಸಿದ್ದಾರೆ. ಅಷ್ಟರಲ್ಲಿ, ಕಾರಿನಲ್ಲಿ ಕುಳಿತಿದ್ದ ವ್ಯಕ್ತಿ ಕಾರಿನಿಂದ ಕೆಳಗೆ ಇಳಿದು ಬಂದು ಬೈಕ್ ಅನ್ನು ಮತ್ತು ದೂರುದಾರರನ್ನು ತಳ್ಳಿ, ಕೆಳಗೆ ಬೀಳಿಸಿದ್ದಾರೆ. ಜತೆಗೆ, ನಾನು ಏರ್​ಪೋರ್ಸ್​​ನಲ್ಲಿ ಇರುವವರು. ನನ್ನ ಜೊತೆ ಆಟ ಆಡಬೇಡ ಎಂದು ಧಮಕಿ ಹಾಕಿ ಹೊಡೆದಿದ್ದಾರೆ.

ಈ ವೇಳೆ, ದೂರುದಾರರು ಸ್ನೇಹಿತನಿಗೆ ಕರೆ ಮಾಡಲು ಪೋನ್ ತೆಗೆದುಕೊಂಡಾಗ ಕೈಯನ್ನು ಕಚ್ಚಿ ಮೊಬೈಲ್ ಪೋನ್ ಅನ್ನು ಕಿತ್ತುಕೊಂಡು ಬಿಸಾಕಿ ಒಡೆದು ಹಾಕಿದ್ದಲ್ಲದೆ, ಬೈಕ್ ಕೀ ಅನ್ನು ಕಿತ್ತುಕೊಂಡು ಬಿಸಾಡಿದ್ದಾರೆ. ಅಷ್ಟೇ ಅಲ್ಲದೆ, ಸಾಯಿಸುವ ಉದ್ದೇಶದಿಂದ ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದುಕೊಂಡು ಕತ್ತನ್ನು ಹಿಸುಕಿದ್ದಾರೆ ಎಂದು ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow