ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಅಕ್ಟೋಬರ್ 27, 2025 - 20:04
 0  13
ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

ಬೆಂಗಳೂರು: ಪರಸ್ಪರ ಸಮ್ಮತಿಯ ಮೇರೆಗೆ ನಡೆದ ಲೈಂಗಿಕ ಕ್ರಿಯೆಯನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಮಹಿಳೆಯೊಬ್ಬರು ವ್ಯಕ್ತಿ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಕೋರ್ಟ್ ರದ್ದುಪಡಿಸಿದೆ.

ಮಹಿಳೆಯು ಡೇಟಿಂಗ್ ಆಪ್ ಮೂಲಕ ಪರಿಚಯವಾದ ಯುವಕನ ವಿರುದ್ಧ, “ಓಯೋ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ” ಎಂದು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆದರೆ ಆರೋಪಿಯನ್ನು ರಕ್ಷಿಸುವ ಮನವಿಯ ಮೇಲಿನ ವಿಚಾರಣೆ ನಡೆಸಿದ ಹೈಕೋರ್ಟ್, “ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ. ಒಪ್ಪಿಗೆಯಿಂದ ಆರಂಭವಾದ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅದು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ತೀರ್ಪು ನೀಡಿದ್ದು, ಇಬ್ಬರ ನಡುವಿನ ವಾಟ್ಸಪ್ ಹಾಗೂ ಇನ್‌ಸ್ಟಾಗ್ರಾಂ ಚಾಟಿಂಗ್ ದಾಖಲೆಗಳು ಅವರ ಪರಸ್ಪರ ಸಮ್ಮತಿಯನ್ನು ಸ್ಪಷ್ಟಪಡಿಸುತ್ತವೆ ಎಂದು ಕೋರ್ಟ್ ಗಮನಿಸಿದೆ.

ಕೋರ್ಟ್‌ ಅಭಿಪ್ರಾಯಪಟ್ಟಂತೆ, ಪ್ರೇಮ ಸಂಬಂಧವು ಮುರಿದ ನಂತರ ಅದರ ಆಧಾರದ ಮೇಲೆ ಅತ್ಯಾಚಾರ ಆರೋಪ ಮಾಡುವುದು ಕಾನೂನುಬಾಹಿರ ಎಂದು ತೀರ್ಮಾನಿಸಿದೆ. ಈ ತೀರ್ಪು, ಸಮ್ಮತಿ ಮತ್ತು ಕಾನೂನುಬದ್ಧ ಅತ್ಯಾಚಾರ ಆರೋಪಗಳ ನಡುವಿನ ಗಡಿಯ ಕುರಿತು ಸ್ಪಷ್ಟತೆ ನೀಡುವ ಪ್ರಮುಖ ಕಾನೂನು ನಿರ್ಣಯವೆಂದು ಕಾನೂನು ವಲಯದಲ್ಲಿ ಪರಿಗಣಿಸಲಾಗಿದೆ.

ಪ್ರಕರಣ ಹಿನ್ನೆಲೆ

ಸಾಂಪ್ರಸ್ ಆಂಥೋಣಿ ಎನ್ನುವ ಯುವಕ ಹಾಗೂ ಮಹಿಳೆ ಡೇಟಿಂಗ್ ಆ್ಯಪ್​ ನಲ್ಲಿ ಪರಸ್ಪರ ಪರಿಚಯವಾಗಿದ್ದು, ಒಂದು ವರ್ಷದವರೆಗೂ ಪರಸ್ಪರ ಚಾಟಿಂಗ್, ಕಾಲ್​​ನಲ್ಲಿ ಮಾತನಾಡು ಆತ್ಮಿಯರಾಗಿದ್ದರು. ನಂತರ ಒಂದು 2024ರ ಆಗಸ್ಟ್ 8ರಂದು ಬೆಂಗಳೂರಿನಲ್ಲಿ ಭೇಟಿಯಾಗಲು ನಿರ್ಧರಿಸಿ ರೆಸ್ಟೋರೆಂಟ್​ನಲ್ಲಿ ಊಟ ಮಾಡಿದ್ದರು. ನಂತರ ಯುವಕ ಮಹಿಳೆಯನ್ನು ಓಯೋ ರೂಮ್​ಗೆ ಕರೆದೊಯ್ದು ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಮರುದಿನ ಯುವಕ ಆಕೆಯನ್ನು ಅಪಾರ್ಟ್​ಮೆಂಟ್​ಗೆ ಡ್ರಾಪ್ ಮಾಡಿದ್ದ. ಆದ್ರೆ, ಇಬ್ಬರ ನಡುವೆ ಅದೇನಾಯ್ತೋ ಏನೋ ಮಹಿಳೆ ಅದೇ ದಿನ ವೈದ್ಯಕೀಯ ತಪಾಸಣೆ ಮಾಡಿಸಿ ಸಾಂಪ್ರಸ್ ಆಂಥೋಣಿ ವಿರುದ್ಧ ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದಳು. ಲೈಂಗಿಕ ಕ್ರಿಯೆಗೆ ಮುಂದಾದಾಗ ಒಪ್ಪಿಗೆ ನಿರಾಕರಿಸಿದ್ದಾಗಿ ಮಹಿಳೆ ದೂರು ನೀಡಿದ್ದು, ಒಪ್ಪಿಗೆ ಸೂಚಿಸಿಲ್ಲವಾದರೂ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ಆರೋಪ ಮಾಡಿದ್ದಳು.

ಒಟ್ಟಿನಲ್ಲಿ ಮಹಿಳೆ ಮೊದಲು ಯುವಕನ ಜೊತೆ ಚೆನ್ನಾಗಿದ್ದು, ಆ ನಂತರ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದರು. ಆದರೆ ಕೋರ್ಟ್  ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿ ಮಹತ್ವ ತೀರ್ಪು ನೀಡಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow