ಬಾನು ಮುಷ್ತಾಕ್ʼಗೆ ಗೆಲುವು: ದಸರಾ ಉದ್ಘಾಟನೆ ವಿರೋಧಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ!
ನವದೆಹಲಿ: ಲೇಖಕಿ ಮತ್ತು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ವಿರೋಧಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
2025ರ ನಾಡಹಬ್ಬ ಮೈಸೂರು ದಸರಾವನ್ನು ಬಾನು ಮುಷ್ತಾಕ್ ಅವರಿಂದ ಉದ್ಘಾಟಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ಅರ್ಜಿಯನ್ನು ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಿ.ಪಿ. ಸುರೇಶ್ ಅವರ "ಹಿಂದೂಯೇತರ ವ್ಯಕ್ತಿಗಳಿಂದ ನಾಡದೇವತೆಗೆ ಪೂಜೆ ಮಾಡಿಸುವುದು ಸರಿಯಲ್ಲ" ಎಂಬ ವಾದವನ್ನು ಸ್ಪಷ್ಟವಾಗಿ ತಳ್ಳಿಹಾಕಿತು.
ಇದಕ್ಕೂ ಮೊದಲು ಬಾನು ಮುಷ್ತಾಕ್ ದಸರಾ ಉದ್ಘಾಟನೆ ವಿರೋಧಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರೂ, ಅದನ್ನು ಹೈಕೋರ್ಟ್ ವಜಾಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟ್ ಕೂಡ ಅರ್ಜಿಯನ್ನು ತಿರಸ್ಕರಿಸಿರುವುದು ಗಮನ ಸೆಳೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?