ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ?: ಡಿ. ಕೆ. ಶಿವಕುಮಾರ್

ಕನಕಪುರ: ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ಕನಕಪುರದ ನಿವಾಸದ ಬಳಿ ಮಾತನಾಡಿದ ಅವರು, ಜೆಡಿಎಸ್ ಮುಕ್ತ ಮಾಡುವುದು ನಮಗೆ ಮುಖ್ಯವಲ್ಲ. 19 ಇದ್ದ ಆ ಪಕ್ಷದ ಶಾಸಕರ ಸಂಖ್ಯೆ 18 ಕ್ಕೆ ಇಳಿದಿದೆ" ಎಂದರು. ಉಪಚುನಾವಣೆ ಗೆಲುವಿನ ನಂತರ ಶಿವಕುಮಾರ್ ಅವರು ಸಿಎಂ ಆಗಬೇಕು ಎನ್ನುವ ಕೂಗಿನ ಬಗ್ಗೆ ಕೇಳಿದಾಗ, "ನಾನು, ಅವರು, ಇವರು ಮುಖ್ಯಮಂತ್ರಿಯಾಗಬೇಕು ಎನ್ನುವುದೆಲ್ಲಾ ಇಲ್ಲಿ ಗೌಣ. ನಮಗೆ ಅಭಿವೃದ್ಧಿ ಮುಖ್ಯ. ಕುಮಾರಸ್ವಾಮಿ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ, ನಾವು ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ತೋರಿಸಬೇಕು" ಎಂದರು.
ಕಾಂಗ್ರೆಸ್ ಸೇರಲು ಬಿಜೆಪಿಯವರೂ ಬಯಸಿದ್ದಾರೆ
ಜನರು ಬಯಸಿದರೆ ಕಾಂಗ್ರೆಸ್ ಸೇರುವುದಾಗಿ ಜಿ. ಟಿ. ದೇವೇಗೌಡರ ಹೇಳಿಕೆಯ ಬಗ್ಗೆ ಕೇಳಿದಾಗ, "ಇದು ಜಿಟಿಡಿ ಅವರೊಬ್ಬರ ಅಭಿಪ್ರಾಯ ಅಲ್ಲ, ಬಹಳಷ್ಟು ಜನ ಬಿಜೆಪಿಯವರು ಇದೇ ಅಭಿಪ್ರಾಯ ಹೊಂದಿದ್ದಾರೆ. ಬಿಜೆಪಿಯವರು ಬೆಂಬಲ ನೀಡದೆ ಇದ್ದಿದ್ದರೆ ನಾವು ಚುನಾವಣೆಯಲ್ಲಿ ಗೆಲ್ಲಲು ಆಗುತ್ತಿತ್ತೇ" ಎಂದು ಮರುಪ್ರಶ್ನಿಸಿದರು.
ಅಶ್ವತ್ ನಾರಾಯಣ್ ದಡ್ಡರೇ?
ಕಾಂಗ್ರೆಸ್ ಗೆಲುವಿಗೆ ರಾಜ್ಯ ಬಿಜೆಪಿ ನಾಯಕರು ಬೆಂಬಲ ನೀಡಿದ್ದಾರೆಯೇ ಎಂದಾಗ, "ಶನಿವಾರದಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ ಅವರು 'ನನಗೆ ಮೊದಲೇ ತಿಳಿದಿತ್ತು, ಯೋಗೇಶ್ವರ್ ಅವರು ಗೆಲ್ಲುತ್ತಾರೆ" ಎಂದು ಹೇಳಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವರು ಈ ರೀತಿ ಹೇಳಲು ದಡ್ಡರೇ?. ಅವರಿಗೆ ಜನರ ನಾಡಿ ಮಿಡಿತ ಗೊತ್ತಿತ್ತು" ಎಂದರು.
ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಬಿಡೋಣ. ಎದುರಾಳಿ ಪಕ್ಷದವರು ಗುರುತು ಮಾಡಿಕೊಂಡು ಪ್ರತಿದಿನ ಒಂದಷ್ಟು ಜನರ ಮನೆಗೆ ಹೋಗುತ್ತಾ ಇದ್ದರು. ಅವರು ಹಾಗೂ ಅವರ ಬೂತ್ ಗಳಲ್ಲಿ ಯಾರಿಗೆ ಮತ ಬಿದ್ದಿದೆ ಎಂಬುದನ್ನು ಪರಿಶೀಲನೆ ಮಾಡಿ. ಎಲ್ಲವನ್ನೂ ಬಿಚ್ಚಿ ಹೇಳಲು ಹೋಗುವುದಿಲ್ಲ" ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






