ಮಕ್ಕಳನ್ನು ಬಲಿ ಪಡೆಯುತ್ತಿದೆ ಕೆಮ್ಮು ಸಿರಪ್: ಕೇಂದ್ರ ಆರೋಗ್ಯ ಇಲಾಖೆಯಿಂದ ಮಹತ್ವದ ಸೂಚನೆ
ನವದೆಹಲಿ:- 12 ಮಕ್ಕಳ ಜೀವವನ್ನು ಬಲಿ ಪಡೆದ ಕೆಮ್ಮು ಸಿರಪ್ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ಸೂಚನೆ ಕೊಟ್ಟಿದೆ. ಮಧ್ಯಪ್ರದೇಶದ ಛಿಂದ್ವಾರಾ, ರಾಜಸ್ಥಾನದ ಭರತ್‌ಪುರ ಮತ್ತು ಸಿಕಾರ್‌ನಲ್ಲಿ ಇಲ್ಲಿಯವರೆಗೆ 12 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದಾರೆ.
ಈ ಮಕ್ಕಳ ದುರಂತ ಅಂತ್ಯ ದೇಶಾದ್ಯಂತ ಸುದ್ದಿ ಮಾಡಿದೆ. ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಆರೋಗ್ಯ ಇಲಾಖೆ ಮಕ್ಕಳಿಗೆ ಕೆಮ್ಮು ಔಷಧಿಯ ಕುರಿತು ಸಲಹೆ ನೀಡಿದೆ. ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಪ್ರಮುಖ ಆದೇಶವನ್ನು ಪಾಲಿಸುವಂತೆ ಸೂಚಿಸಿದೆ. ಮಕ್ಕಳಿಗೆ ಕೆಮ್ಮು ಔಷಧಿಯನ್ನು ಬಹಳ ಎಚ್ಚರಿಕೆಯಿಂದ ಮತ್ತು ಸೀಮಿತ ಪ್ರಮಾಣದಲ್ಲಿ ನೀಡಬೇಕು ಎಂದಿದೆ.
ಕೆಮ್ಮು ಮತ್ತು ಶೀತದಿಂದ ಬಳಲುತ್ತಿರುವ ಹೆಚ್ಚಿನ ಮಕ್ಕಳು ತಾವಾಗಿಯೇ ಗುಣಮುಖರಾಗುತ್ತಾರೆ. ಅವರಿಗೆ ಔಷಧಿಗಳ ಅಗತ್ಯವಿಲ್ಲ. 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಔಷಧಿಯನ್ನು ನೀಡಬಾರದು. ಈ ಔಷಧಿಗಳನ್ನು ಸಾಮಾನ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡದಿಲ್ಲ.
ವೈದ್ಯರು ಪರೀಕ್ಷೆಯ ನಂತರ ಅಗತ್ಯವೆಂದು ಭಾವಿಸಿದರೆ ಮಾತ್ರ 5 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಔಷಧಿಗಳನ್ನು ನೀಡಬೇಕು. ಇದನ್ನು ಕಡಿಮೆ ಪ್ರಮಾಣದಲ್ಲಿ, ಅಲ್ಪಾವಧಿಗೆ ನೀಡಬೇಕು. ಮಕ್ಕಳ ಆರೈಕೆಯಲ್ಲಿ ಮನೆ, ಔಷಧೀಯವಲ್ಲದ ಕ್ರಮಗಳನ್ನ ತೆಗೆದುಕೊಳ್ಳಬಾರದು. ವಿಶ್ರಾಂತಿ ಮತ್ತು ಸಹಾಯಕ ಆರೈಕೆಗೆ ಆದ್ಯತೆ ನೀಡಬೇಕು ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.
GMP ಅಡಿಯಲ್ಲಿ ತಯಾರಿಸಿದ ಸುರಕ್ಷಿತ ಔಷಧಿಗಳನ್ನು ಮಾತ್ರ ಸಂಗ್ರಹಿಸಿ ನೀಡಬೇಕು ಎಂದು ಕೇಂದ್ರ ಹೇಳಿದೆ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಸೂಚನೆ ನೀಡಬೇಕು. ಈ ಬಗ್ಗೆ ಹೆಚ್ಚು ಪ್ರಚಾರ ಮಾಡುವಂತೆ ತಿಳಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?