ಮನೆ ಕ್ಲೀನ್ ಮಾಡು ಅಂತ ಹೇಳಿದ್ದಕ್ಕೆ ಜಗಳ: ಪತಿಯ ಕಿವಿ ಕಚ್ಚಿ ತುಂಡು ಮಾಡಿದ ಪತ್ನಿ..!
ನವದೆಹಲಿ: ಮನೆ ಕ್ಲೀನ್ ಮಾಡು ಎಂದು ಹೇಳಿದ್ದಕ್ಕೆ ಗಂಡ-ಹೆಂಡತಿಯ ನಡುವೆ ಭಾರೀ ಜಗಳವಾಗಿದೆ. ಜಗಳದಲ್ಲಿ ಆಕ್ರೋಶಗೊಂಡ ಪತ್ನಿ ತನ್ನ ಗಂಡನ ಬಲ ಕಿವಿಯನ್ನು ಕಚ್ಚಿ ತುಂಡುಮಾಡಿದ ಘಟನೆ ದೆಹಲಿಯ ಸುಲ್ತಾನ್‌ಪುರಿ ಪ್ರದೇಶದಲ್ಲಿ ನಡೆದಿದೆ.
ಗಾಯಗೊಂಡ 45 ವರ್ಷದ ಪತಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಂತ್ರಸ್ತ ವ್ಯಕ್ತಿಯ ದೂರು ಆಧರಿಸಿ, ಪತ್ನಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 (ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಾಯ ಉಂಟುಮಾಡುವುದು) ಅಡಿಯಲ್ಲಿ FIR ದಾಖಲಾಗಿದೆ.
ಬೆಳಗ್ಗೆ ಸುಮಾರು 9:20ರ ಸುಮಾರಿಗೆ ಪತಿ ತನ್ನ ಪತ್ನಿಗೆ ಮನೆ ಸ್ವಚ್ಛಗೊಳಿಸಲು ಹೇಳಿ ಹೊರಗೆ ಕಸ ಎಸೆಯಲು ಹೋಗಿದ್ದನು. ಮನೆಗೆ ವಾಪಸ್ಸು ಬಂದಾಗ ಪತ್ನಿ ಜಗಳ ಆರಂಭಿಸಿದ್ದಾಳೆ. ಜಗಳದ ವೇಳೆ ಪತ್ನಿ, “ಮಕ್ಕಳೊಂದಿಗೆ ಪ್ರತ್ಯೇಕವಾಗಿ ಇರಬೇಕು, ಮನೆ ಮಾರಾಟ ಮಾಡಿ ನನಗೂ ಪಾಲು ಕೊಡಬೇಕು” ಎಂದು ಬೇಡಿಕೆಯಿಟ್ಟಿದ್ದಾಳೆ.
ಪತಿ ಸಮಾಧಾನಪಡಿಸಲು ಪ್ರಯತ್ನಿಸಿದರೂ ಮಾತಿನ ಚಕಮಕಿ ತೀವ್ರಗೊಂಡಿದ್ದು, ಕೋಪಗೊಂಡ ಪತ್ನಿ ಗಂಡನ ಮೇಲೆ ದಾಳಿ ಮಾಡಲು ಮುಂದಾಗಿದ್ದಾಳೆ. ಆತ ಮನೆಯಿಂದ ಹೊರಬರಲು ಯತ್ನಿಸಿದಾಗ, ಹಿಂಬದಿಯಿಂದ ಹಿಡಿದು ಬಲ ಕಿವಿಯನ್ನು ಕಚ್ಚಿ ತುಂಡುಮಾಡಿದ್ದಾಳೆ ಎಂದು ಪತಿ ದೂರಿನಲ್ಲಿ ತಿಳಿಸಿದ್ದಾರೆ.
ರಕ್ತಸ್ರಾವದಿಂದ ಬಳಲುತ್ತಿದ್ದ ಪತಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಹೇಳುವಂತೆ, ಸಂತ್ರಸ್ತ ವ್ಯಕ್ತಿ ಇನ್ನೂ ಹೇಳಿಕೆ ನೀಡುವ ಸ್ಥಿತಿಯಲ್ಲಿಲ್ಲ. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?