ವಿಜ್ಞಾನ ಓದಿಯೂ ಮೌಢ್ಯ ನಂಬುತ್ತೀರಿ ಅಂದರೆ ನೀವು ಓದಿದ್ದೇ ದಂಡ ತಾನೇ: ಸಿಎಂ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು: "ವಿದ್ಯಾರ್ಥಿಗಳು ವಿಜ್ಞಾನ ಓದಿ, ಆಮೇಲೆ ಮೌಢ್ಯ ನಂಬುತ್ತಿದ್ರೆ, ಅವರು ಓದಿದ್ದು ದಂಡವೇ ಸರಿ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬೆಂಗಳೂರು ನಗರದ ನೃಪತುಂಗ ವಿಶ್ವವಿದ್ಯಾಲಯದ ಆವರಣದಲ್ಲಿ ಹೊಸ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಮಾಜದಲ್ಲಿ ಇನ್ನೂ ಜಾತಿ ತಾರತಮ್ಯ ಜೀವಂತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸತ್ಯವಾದ ಬದಲಾವಣೆ ಬರಬೇಕಾದರೆ, ಎಲ್ಲರಲ್ಲೂ ವೈಜ್ಞಾನಿಕ ಮನೋಭಾವ ಬೆಳೆಬೇಕು,” ಎಂದು ಹೇಳಿದರು.
ಸಿದ್ದರಾಮಯ್ಯ ಅವರು ಮುಂದುವರಿದು ಹೇಳಿದರು:
"ವಿದ್ಯೆ ಅಥವಾ ಪ್ರತಿಭೆ ಯಾರ ಮನೆಯಲ್ಲಿ ಹುಟ್ಟಿದವರ ಹಕ್ಕು ಅಲ್ಲ. ಅದು ಎಲ್ಲರಿಗೂ ಅವಕಾಶ ಸಿಗಬೇಕು. ರಾಮಾಯಣ ಬರೆದ ವಾಲ್ಮೀಕಿ ಬೇಡರ ಜಾತಿಯವರಾಗಿದ್ದರೆ, ಮಹಾಭಾರತ ಬರೆದ ವ್ಯಾಸರು ಬೆಸ್ತ ಸಮುದಾಯದವರು. ಅದರಿಂದ ಗೊತ್ತಾಗುವುದು ಏನೆಂದರೆ, ವಿದ್ಯೆ ಯಾರ ಸ್ವತ್ತು ಅಲ್ಲ. ಅವಕಾಶ ಸಿಕ್ಕಾಗ ಮಾತ್ರ ಅದು ಬೆಳೆಯುತ್ತದೆ. ಎಲ್ಲರೂ ವೈಚಾರಿಕತೆ, ವೈಜ್ಞಾನಿಕತೆ ಬೆಳೆಸಿಕೊಳ್ಳಬೇಕು. ವಿಜ್ಞಾನ ಓದುವ ವಿದ್ಯಾರ್ಥಿಗಳು ಸಮಾಜದಲ್ಲಿ ಬೆಳಕನ್ನು ಹರಡುವ ಕೆಲಸ ಮಾಡಬೇಕು."
ಅವರು ತಿಳಿಸಿದಂತೆ, ಇಂದು ವಿಜ್ಞಾನ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಆತಂಕದ ವಿಷಯ. विज्ञान, ತಂತ್ರಜ್ಞಾನ ಮತ್ತು ವೈಜ್ಞಾನಿಕ ಮನೋಭಾವ ನಮ್ಮ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಬಹಳ ಮುಖ್ಯ. ಆದರೆ ಇಂದು ಕೆಲವರು ವಿಜ್ಞಾನ ಓದಿದ್ರು ಸಹ ಮೌಢ್ಯ ನಂಬಿಕೆಗಳಲ್ಲಿ ನಂಬಿಕೆ ಇಡ್ತಿದ್ದಾರೆ. ಇದು ಶಿಕ್ಷಣದ ಗಂಭೀರ ಕೊರತೆ.
"ಬಸವಣ್ಣ ಮತ್ತು ಶರಣರು ಶತಮಾನಗಳ ಹಿಂದೆ ಮೌಢ್ಯ ನಂಬಿಕೆಗಳಿಗೆ ವಿರೋಧ ಹೇಳಿದ್ದರು. ಆದರೆ ಇವತ್ತಿಗೂ ಮೌಢ್ಯ ಹೋಗಿಲ್ಲ. ಯಾಕೆಂದರೆ ನಮ್ಮ ಸಮಾಜ ಇನ್ನೂ ಜಾತಿ ತಾರತಮ್ಯದಿಂದ ಕೂಡಿದೆ. ಕೆಲವರಂತು ಮೌಢ್ಯವನ್ನು ಬಿತ್ತಿ, ತಾರತಮ್ಯವನ್ನು ಗಟ್ಟಿ ಮಾಡುತ್ತಿದ್ದಾರೆ," ಎಂದರು.
"ನಾನು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದಾಗ 'ಮೌಢ್ಯ ನಿಷೇಧ ಕಾಯ್ದೆ' ತರಲು ಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ. ಯಾಕೆಂದರೆ ಮೌಢ್ಯವನ್ನು ಬೆಳೆಸುವ ವ್ಯವಸ್ಥೆಯೇ ಗಟ್ಟಿಯಾಗಿದೆಯೆನ್ನಿಸುತ್ತದೆ," ಎಂದು ವಿಷಾದ ವ್ಯಕ್ತಪಡಿಸಿದರು. "ವಿಜ್ಞಾನ ಓದಿದರೂ ಕೆಲವರು ಹಣೆಬರಹ, ಗ್ರಹಚಾರ, ಕರ್ಮಸಿದ್ಧಾಂತ ನಂಬುತ್ತಿದ್ದಾರೆ. ಇದರಿಂದ ಅವರ ಓದಿದ್ದು ನಿಜಕ್ಕೂ ಶಾಪವಾಗಿ ತೋರುತ್ತದೆ," ಎಂದು ಕಟು ಟೀಕೆ ಮಾಡಿದರು.
ನಿಮ್ಮ ಪ್ರತಿಕ್ರಿಯೆ ಏನು?