ವಿದ್ಯಾರ್ಥಿನಿ ವರ್ಷಿತಾ ಹತ್ಯೆ ಕೇಸ್:‌ ನಾನು ಗರ್ಭಿಣಿ.. ಮದುವೆ ಆಗು ಎಂದಿದ್ದಕ್ಕೆ ಕೊಂದೇ ಬಿಟ್ನಾ..!?

ಆಗಸ್ಟ್ 20, 2025 - 14:08
 0  51
ವಿದ್ಯಾರ್ಥಿನಿ ವರ್ಷಿತಾ ಹತ್ಯೆ ಕೇಸ್:‌ ನಾನು ಗರ್ಭಿಣಿ.. ಮದುವೆ ಆಗು ಎಂದಿದ್ದಕ್ಕೆ ಕೊಂದೇ ಬಿಟ್ನಾ..!?

ಚಿತ್ರದುರ್ಗ: ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದ ವಿದ್ಯಾರ್ಥಿನಿ ವರ್ಷಿತಾ (19) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಆರೋಪಿ ಚೇತನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದು, ತನ್ನ ಕ್ರೂರ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಪ್ರಕಾರ, ಚೇತನ್ ಗಂಗಾವತಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ವರ್ಷಿತಾಳೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದ. ಆದರೆ ಇತ್ತೀಚೆಗೆ ವರ್ಷಿತಾ ಬೇರೊಬ್ಬನೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂಬ ಅನುಮಾನದಿಂದ ಇಬ್ಬರ ನಡುವೆ ಜಗಳಗಳು ನಡೆದಿದ್ದವು. ಈ ನಡುವೆ, ವರ್ಷಿತಾ ಗರ್ಭಿಣಿಯಾಗಿದ್ದಾಳೆ ಎಂಬ ಸಂಗತಿ ಹೊರಬಂದಿತ್ತು.

ಆಗಸ್ಟ್ 18ರಂದು ಮಧ್ಯಾಹ್ನ, ಚೇತನ್ ವರ್ಷಿತಾಳನ್ನು ಗೋನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಅಲ್ಲಿ ಮೊದಲು ದೈಹಿಕ ಸಂಬಂಧ ಬೆಳೆಸಿದ ಬಳಿಕ, ತಲೆಗೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ, ಬೈಕ್‌ನಲ್ಲಿ ತಂದಿದ್ದ ಪೆಟ್ರೋಲ್ ಸುರಿದು ಶವಕ್ಕೆ ಬೆಂಕಿ ಹಚ್ಚಿದ್ದಾನೆ. ಆ.19ರ ಬೆಳಿಗ್ಗೆ ಮತ್ತೆ ಸ್ಥಳಕ್ಕೆ ಬಂದು ಮತ್ತೊಮ್ಮೆ ಪೆಟ್ರೋಲ್ ಸುರಿದು ಶವ ಸುಟ್ಟಿದ್ದಾನೆ. ಕೊನೆಗೆ, ಶವದ ಬಳಿಯಲ್ಲಿ ವರ್ಷಿತಾಳ ಚಪ್ಪಲಿಯನ್ನು ಬಿಟ್ಟು ಅಲ್ಲಿಂದ ಹೊರಟಿದ್ದಾನೆ ಎಂದು ಆರೋಪಿಯೇ ಒಪ್ಪಿಕೊಂಡಿದ್ದಾನೆ.

ಇದೇ ವೇಳೆ, ಆರೋಪಿಗೆ ಕ್ಯಾನ್ಸರ್ ಮೂರನೇ ಹಂತದಲ್ಲಿದೆ ಎಂಬುದೂ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ, ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಚೇತನ್‌ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ನಿವಾಸಿ ಎಂದು ತಿಳಿದುಬಂದಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow