ಸಂಕ್ರಾತಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು? ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

ಜನವರಿ 14, 2025 - 07:00
 0  11
ಸಂಕ್ರಾತಿ ಹಬ್ಬದ ಬಗ್ಗೆ ನಿಮಗೆಷ್ಟು ಗೊತ್ತು? ಇತಿಹಾಸ, ಮಹತ್ವದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ

 

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ಸೂರ್ಯ ತನ್ನ ಪಥವನ್ನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಬದಲಿಸುವ ದಿನವನ್ನು ದೇಶದಲ್ಲಿ ಮಕರ ಸಂಕ್ರಮಣ ಎಂದು ಆಚರಿಸುತ್ತೇವೆ. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಸಂಭ್ರಮಿಸಲಾಗುತ್ತದೆ.

ಇತಿಹಾಸ: ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ.

ಸಂಕ್ರಾಂತಿಯ ಬಗ್ಗೆ ಪಂಚಾಂಗದಲ್ಲಿ ಇರುವ ಮಾಹಿತಿ: ಪಂಚಾಂಗದಲ್ಲಿ ಸಂಕ್ರಾಂತಿಯ ರೂಪ, ವಯಸ್ಸು, ವಸ್ತ್ರ, ಹೋಗುವ ದಿಕ್ಕು ಮುಂತಾದವುಗಳ ಮಾಹಿತಿ ಇರುತ್ತದೆ. ಅದು ಕಾಲಮಹಿಮೆಗನುಸಾರ ಅವಳಲ್ಲಿ ಆಗುವ ಬದಲಾವಣೆಯನ್ನು ಅನುಸರಿಸಿರುತ್ತದೆ.

ಮಕರ ಸಂಕ್ರಾಂತಿ ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಸಾಧನೆಯ ದೃಷ್ಟಿಯಿಂದ ಮಹತ್ವ: ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಸಮಯ ಚೈತನ್ಯದ ಲಾಭವಾಗುತ್ತದೆ.

ಹಬ್ಬವನ್ನು ಆಚರಿಸುವ ಪದ್ಧತಿ ಮಕರಸಂಕ್ರಾಂತಿಯ ಕಾಲದಲ್ಲಿ ತೀರ್ಥಸ್ನಾನವನ್ನು ಮಾಡುವುದರಿಂದ ಮಹಾಪುಣ್ಯವು ದೊರೆಯುವುದು. ‘ಮಕರಸಂಕ್ರಾಂತಿಯ ದಿನ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ಕಾಲವು ಪುಣ್ಯಕಾಲವಾಗಿರುತ್ತದೆ. ಈ ಕಾಲದಲ್ಲಿ ತೀರ್ಥಸ್ನಾನಕ್ಕೆ ವಿಶೇಷ ಮಹತ್ವವಿದೆ. ಗಂಗಾ, ಯಮುನಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳ ದಡದಲ್ಲಿರುವ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಮಹಾಪುಣ್ಯವು ಲಭಿಸುತ್ತದೆ.’

‘ಪರ್ವಕಾಲದಲ್ಲಿ ದಾನದ ಮಹತ್ವ: ಮಕರಸಂಕ್ರಾಂತಿಯಿಂದ ರಥ ಸಪ್ತಮಿಯವರೆಗಿನ ಕಾಲವು ಪರ್ವಕಾಲ ವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ದಾನ ಕೊಡುವ ವಸ್ತುಗಳು: ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ದೋಚುತ್ತಾರೆ (ಅಪಹರಿಸುತ್ತಾರೆ) ಮತ್ತು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ.’

ಬಾಗಿನ ನೀಡುವುದರ ಮಹತ್ವ: ‘ಬಾಗಿನ ನೀಡುವುದೆಂದರೆ’ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ.

ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು? ಇತ್ತೀಚೆಗೆ ಸಾಬೂನು, ಪ್ಲಾಸ್ಟಿಕ್‌ನ ವಸ್ತುಗಳಂತಹ ನಿರುಪಯುಕ್ತ ವಸ್ತುಗಳನ್ನು ಬಾಗಿನವೆಂದು ಕೊಡುವ ಅಯೋಗ್ಯ ಪದ್ಧತಿಯು ರೂಢಿಯಲ್ಲಿದೆ. ಈ ವಸ್ತುಗಳ ಬದಲಿಗೆ ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

ಎಳ್ಳಿನ ಉಪಯೋಗ: ಸಂಕ್ರಾಂತಿಯಲ್ಲಿ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ.ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಪೂಜ್ಯರಿಗೆ ಸತ್ಪಾತ್ರರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪಗಳನ್ನು ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಮಕರ ಸಂಕ್ರಾಂತಿಯ ಕಾಲವು ಸಾಧನೆ ಮಾಡುವವರಿಗೆ ಪೂರಕವಾಗಿದೆ ! ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿಯವರೆಗಿನ ಕಾಲವನ್ನು ‘ದಕ್ಷಿಣಾಯಣ’ ಎನ್ನುತ್ತಾರೆ. ಸೂರ್ಯನ ದಕ್ಷಿಣಾಯಣ ಆರಂಭವಾಗುವುದಕ್ಕೆ ಬ್ರಹ್ಮಾಂಡದ ಸೂರ್ಯನಾಡಿ ಕಾರ್ಯನಿರತವಾಗುವುದು ಎಂದು ಹೇಳುತ್ತಾರೆ. ಬ್ರಹ್ಮಾಂಡದ ಸೂರ್ಯನಾಡಿಯು ಕಾರ್ಯನಿರತವಾಗುವುದರಿಂದ (ಸೂರ್ಯನ ದಕ್ಷಿಣಾಯಣದಲ್ಲಿ) ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಹೆಚ್ಚು ಪ್ರಮಾಣದಲ್ಲಿರುತ್ತದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow