ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚನೆ: ನಟ ಧ್ರುವ ಸರ್ಜಾ ವಿರುದ್ಧ FIR

ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ನಟ ಧ್ರುವ ಸರ್ಜಾ ವಿರುದ್ಧ 3.15 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾಹಿತಿಯ ಪ್ರಕಾರ, ರಾಘವೇಂದ್ರ ಹೆಗ್ಗಡೆ ಎಂಬವರು ಧ್ರುವ ಸರ್ಜಾ ವಿರುದ್ಧ ದೂರು ಸಲ್ಲಿಸಿದ್ದಾರೆ. 2016 ರಿಂದ 2018 ರವರೆಗೆ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದು, ಆ ಸಮಯದಲ್ಲಿ ಧ್ರುವ ಸರ್ಜಾ “ಸೋಲ್ಜರ್” ಎಂಬ ಸಿನಿಮಾ ಮಾಡುವುದಾಗಿ ಹೇಳಿ, ಒಪ್ಪಂದಕ್ಕೆ ಸಹಿ ಹಾಕುವ ಮೊದಲು 3.15 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾಘವೇಂದ್ರ ಹೆಗ್ಗಡೆ ಹೆಚ್ಚಿನ ಬಡ್ಡಿಯಲ್ಲಿ ಸಾಲ ಪಡೆದು, ಧ್ರುವ ಒಡೆತನದ ಆರ್‌ಹೆಚ್ ಎಂಟರ್‌ಟೇನ್‌ಮೆಂಟ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಸಿನಿಮಾ ನಿರ್ಮಾಣವಾಗದೇ, ಆ ಹಣವನ್ನು ಅಪಾರ್ಟ್‌ಮೆಂಟ್ ಖರೀದಿಗೆ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
2019ರ ಫೆಬ್ರವರಿ 21ರಂದು ಅಧಿಕೃತ ಒಪ್ಪಂದ ಮಾಡಿಕೊಂಡಿದ್ದರೂ, ಹಣದ ವ್ಯವಹಾರವು ಅದಕ್ಕೂ ಮುಂಚೆ ನಡೆದಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಪ್ರಸ್ತುತ, ಅಂಬೋಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






