ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದೀರಾ? ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಿದೆ ಬಿಬಿಎಂಪಿ.!

ಆಸ್ತಿ ತೆರಿಗೆ ಕಟ್ಟದೆ ಬಿಬಿಎಂಪಿಗೆ ತಲೆನೋವಾಗಿರುವ ಆಸ್ತಿ ಮಾಲೀಕರಿಗೆ ಪಾಠ ಕಲಿಸಲು ಬಿಬಿಎಂಪಿ ಮುಂದಾಗಿದೆ. ಆಸ್ತಿ ತೆರಿಗೆ ಕಟ್ಟದೇ ಇರುವ ಆಸ್ತಿ ಮಾಲೀಕರ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಮೂಲಕ ಆಸ್ತಿ ತೆರಿಗೆ ಬಾಕಿಯನ್ನು ಬಡ್ಡಿ ಸಮೇತ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ಈ ಕುರಿತಾಗಿ ಬಿಬಿಎಂಪಿ ಸೋಮವಾರವೇ ಅಧಿಸೂಚನೆ ಹೊರಡಿಸಿದೆ. ತನ್ನ ಆಸ್ತಿ ತೆರಿಗೆ ವಸೂಲಿ ಹಾಗೂ ನಿರ್ವಹಣಾ ನಿಯಮವನ್ನು ಮಾರ್ಪಡಿಸಿರುವ ಬಿಬಿಎಂಪಿ, ಬೆಂಗಳೂರು ನಗರಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ಧಾರೆ ಎಂದು ಹೇಳಿದೆ.
ಈವರೆಗೆ ಇರುವ ಕಾನೂನುಗಳ ಪ್ರಕಾರ ಬಿಬಿಎಂಪಿ ಅಧಿಕಾರಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವರ ವಿರುದ್ಧ ನೋಟಿಸ್ ನೀಡುತ್ತಿದ್ದರು. ಜೊತೆಯಲ್ಲೇ ಆಸ್ತಿಯನ್ನು ಸೀಲ್ ಮಾಡುವ ಅಧಿಕಾರವನ್ನೂ ಹೊಂದಿದ್ದರು. ಆದರೆ, ಈ ಸಂದರ್ಭದಲ್ಲಿ ಬಿಬಿಎಂಪಿ ನಿಲುವು ಪ್ರಶ್ನಿಸಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ನ್ಯಾಯಾಲಯದ ಮೊರೆ ಹೋಗುತ್ತಿದ್ದರು. ಹೀಗಾಗಿ, ಕಾನೂನು ವ್ಯಾಜ್ಯದ ಸಂಕಷ್ಟದಿಂದ ಹೊರ ಬರಲು ತೀರ್ಮಾನಿಸಿರುವ ಬಿಬಿಎಂಪಿ, ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಬ್ಯಾಂಕ್ ಖಾತೆಯನ್ನೇ ಲಿಂಕ್ ಮಾಡಲು ತೀರ್ಮಾನಿಸಿದೆ. ಅಷ್ಟೇ ಅಲ್ಲ, ಬಾಕಿದಾರರ ಸ್ಥಿರಾಸ್ತಿಯನ್ನೂ ಲಿಂಕ್ ಮಾಡಲು ಮುಂದಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






