ಸಿಲಿಕಾನ್ ಸಿಟಿ ಬೆಂಗಳೂರಿಗೂ ಕಾಲಿಟ್ಟ HMPV ವೈರಸ್..! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ

ಕೋವಿಡ್ ವೈರಾಣು ಜಗತ್ತನ್ನು ಕಾಡಿದ 5 ವರ್ಷಗಳ ನಂತರ ಈಗ ಚೀನಾದಲ್ಲಿ ಮತ್ತೊಂದು ನಿಗೂಢ ವೈರಾಣು ಎದುರಾಗಿದ್ದು ಆತಂಕ ಹೆಚ್ಚಿಸಿದೆ. ಹ್ಯೂಮನ್ ಮೆಟಾಪ್ನ್ಯೂಮೊವೈರಸ್ ಈ ಬಾರಿ ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ವೈರಾಣು ಆಗಿದ್ದು, ನೆರೆಯ ರಾಷ್ಟ್ರ ಮತ್ತೊಮ್ಮೆ ಹೊಸ ವೈರಾಣುವಿನಿಂದ ಪಾರಾಗಲು ಸ್ಕ್ರೀನಿಂಗ್, ಪತ್ತೆ ಮತ್ತು ಪ್ರತ್ಯೇಕತೆಯ ಪ್ರೋಟೋಕಾಲ್ಗಳ ಮೊರೆ ಹೋಗಿದೆ.
ಅದಲ್ಲದೆ ಇದೀಗ ಬೆಂಗಳೂರಿನ 8 ತಿಂಗಳ ಮಗುವಿಗೆ HMPV ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಆರೋಗ್ಯ ಇಲಾಖೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ಭಾರತದಲ್ಲಿ ಸಾಮಾನ್ಯವಾಗಿದ್ದು, ಚೀನಾದಲ್ಲಿ ಪತ್ತೆಯಾಗಿರುವ ಮ್ಯುಟೇಟೆಡ್ ವೈರಸ್‌ನೊಂದಿಗೆ ಇದಕ್ಕೆ ಸಂಬಂಧ ಇದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗಾಗಿ ಚಿಂತಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಎಚ್ಎಂಪಿವಿ ವೈರಸ್ ಭಾರತದಲ್ಲೂ ಇದೆ. ಆದರೆ, ಅದು ಮ್ಯೂಟೆಷನ್ ಆಗಿದೆಯಾ ಎಂಬ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ನಮಗೆ ಚೀನಾದಲ್ಲಿ ಮ್ಯುಟೇಟ್ ಆಗಿರುವ ವೈರಸ್ ಹೇಗಿದೆ ಎಂದು ತಿಳಿದಿಲ್ಲ. ಹೀಗಾಗಿ ಇಲ್ಲಿ ಪತ್ತೆಯಾಗಿರುವುದು ಸಾಮಾನ್ಯ HMPV ವೈರಸ್ಸೇ ಅಥವಾ ಚೀನಾದ ತಳಿಯಾ ಎಂಬ ಗೊಂದಲ ಇದೆ. ಭಾರತದಲ್ಲೂ ಸಾಮಾನ್ಯ HMPV ವೈರಸ್ ಶೇ 0.78 ರಷ್ಟು ಕಾಣಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಗುವಿನಲ್ಲಿ ವೈರಸ್ ಪತ್ತೆಯಾದ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದೂಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸೂಕ್ತ ಮುನ್ನೆಚ್ಚರಿಕೆ ವಹಿಸಿ ಎಂದು ಕೇಂದ್ರ ಆರೋಗ್ಯ ಇಲಾಖೆ ರಾಜ್ಯಕ್ಕೆ ಸೂಚಿಸಿದೆ.
ನಿಮ್ಮ ಪ್ರತಿಕ್ರಿಯೆ ಏನು?






